ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದ್ದು, ಈ ಪ್ರಕರಣವನ್ನು ಸಿಬಿಐಗೆ ವಹಿಸಿ ಸುಪ್ರೀಂಕೋರ್ಟ್ ಆದೇಶ ಹೊರಡಿಸಿದೆ.
ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರಿದ್ದ ಏಕಸದಸ್ಯ ಪೀಠ ಈ ತೀರ್ಪು ನೀಡಿದ್ದು, ಬಿಹಾರ ಸರ್ಕಾರ ತನಿಖೆಯನ್ನ ಸಿಬಿಐಗೆ ವರ್ಗಾವಣೆ ಮಾಡಲು ಸಮರ್ಥವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಈ ಅರ್ಜಿಯ ವಿಚಾರಣೆ ನಡೆಸಿದ್ದು, ತೀರ್ಪು ಕಾಯ್ದಿರಿಸಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಿಬಿಐಗೆ ಪ್ರಕರಣವನ್ನು ವಹಿಸಿ ಮಹತ್ವದ ತೀರ್ಪು ನೀಡಿದೆ.
ಬಿಹಾರ ಸರ್ಕಾರ ಪರವಾಗಿ ಮಾಜಿ ಸಾಲಿಸಿಟರ್ ಜನರಲ್ ಮಹೀಂದರ್ ಸಿಂಗ್ ವಾದ ಮಂಡನೆ ಮಾಡಿದ್ದು, ಬಿಹಾರ ಸಿಎಂ ನಿತೀಶ್ ಕುಮಾರ್, ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಇದರ ಜೊತೆಗೆ ಸಂಬಂಧಪಟ್ಟ ಪ್ರಾಧಿಕಾರಗಳ ಸಲಹೆ ಮೇರೆಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ರಿಯಾ ಚಕ್ರವರ್ತಿ ಪರವಾಗಿ ವಾದ ಮಂಡನೆ ಮಾಡಿದ್ದ ಹಿರಿಯ ವಕೀಲರಾದ ಶ್ಯಾಮ್ ದಿವಾನ್ ಬಿಹಾರ ಪೊಲೀಸರು ರಿಯಾ ಮೇಲೆ ಎಫ್ಐಆರ್ ದಾಖಲಿಸಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ, ತಮಗೂ ಬಿಹಾರ ಪೊಲೀಸರಿಗೂ ಸಂಬಂಧವಿಲ್ಲವೆಂದು ವಾದಿಸಿದ್ದರು.
ಬಿಹಾರ ಪೊಲೀಸರು ದಾಖಲಿಸಿಕೊಂಡಿದ್ದ ಎಫ್ಐಆರ್ ಆಧಾರದಲ್ಲಿ ಹಾಗೂ ಬಿಹಾರ ಸರ್ಕಾರದ ಸೂಚನೆಯಂತೆ ಸಿಬಿಐ ರಿಯಾ ಅವರ ಮೇಲೆ ಎಫ್ಐಆರ್ ದಾಖಲಿಸಿಕೊಂಡಿತ್ತು. ಈ ವೇಳೆ ಸಿಬಿಐ ತನಿಖೆಗೆ ರಿಯಾ ಹಾಗೂ ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಿಹಾರ ಸರ್ಕಾರ ಸಿಬಿಐಗೆ ಸುಶಾಂತ್ ಸಿಂಗ್ ಅವರ ಸಾವು ಪ್ರಕರಣವನ್ನು ವಹಿಸಲು ಸಮರ್ಥವಾಗಿದೆ ಎಂದು ಉಲ್ಲೇಖಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ.