ತಿರುವನಂತಪುರಂ (ಕೇರಳ): ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ಮಕ್ಕಳು ಮತ್ತು ವಯಸ್ಕರ ಆತ್ಮಹತ್ಯೆಯ ಪ್ರಮಾಣ ಹೆಚ್ಚುತ್ತಿರುವ ಕಳವಳಕಾರಿ ಮಾಹಿತಿ ಲಭ್ಯವಾಗಿದೆ.
ಈ ಬಗ್ಗೆ ಅಧ್ಯಯನ ಮಾಡಿರುವ ಡಿಜಿಪಿ ಆರ್. ಶ್ರೀಲೇಖಾ ನೇತೃತ್ವದ ಸಮಿತಿ, ಈ ಆತಂಕಕಾರಿ ವಿಷಯವನ್ನು ಬಹಿರಂಗಪಡಿಸಿದೆ. ಲೈಂಗಿಕ ದೌರ್ಜನ್ಯ ಹಾಗೂ ಪ್ರೇಮ ವೈಫಲ್ಯದಿಂದ ಹೆಚ್ಚಿನ ಜನರು ಸಾವಿಗೆ ಶರಣಾಗುತ್ತಿದ್ದಾರೆ ಎನ್ನಲಾಗಿದೆ.
ಜನವರಿ 2020 ರಿಂದ ಜುಲೈ 2020 ರವರೆಗಿನ ಅಂಕಿಅಂಶಗಳ ಪ್ರಕಾರ, 158 ಅಪ್ರಾಪ್ತರಲ್ಲಿ 90 ಮಂದಿ ಬಾಲಕಿಯರು ಹಾಗೂ 18 ವರ್ಷದೊಳಗಿನ 148 ಜನರು ಬದುಕು ಕೊನೆಗೊಳಿಸಿದ್ದಾರೆ. ಇದರಲ್ಲಿ ಪೋಷಕರು ಬುದ್ಧಿಮಾತು ಹೇಳಿದ್ದರಿಂದಲೇ 132 ಜನರು ಮೃತಪಟ್ಟಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶೇಕಡ 41 ರಷ್ಟು ಮಕ್ಕಳ ಆತ್ಮಹತ್ಯೆಗೆ ನಿಖರವಾದ ಕಾರಣ ಪತ್ತೆಯಾಗಿಲ್ಲ.
ಕೋವಿಡ್ನ ಲಾಕ್ಡೌನ್ ಅವಧಿಯಲ್ಲಿ 173 ಮಕ್ಕಳು, ಹದಿ ಹರೆಯದವರು ಮೃತಪಟ್ಟಿದ್ದಾರೆಂದು ಪೊಲೀಸ್ ಇಲಾಖೆಯಿಂದ ತಿಳಿದು ಬಂದಿದೆ.