ಮುಂಬೈ: ಮುಂದಿನ ತಿಂಗಳ ಅಂತ್ಯದಿಂದ ಉಡಾನ್ ಯೋಜನೆ ಅಡಿಯಲ್ಲಿ, ಕೆಲವು ಸೇವೆಗಳನ್ನು ಒಳಗೊಂಡಂತೆ ತನ್ನ ದೇಶಿಯ ಮಾರ್ಗಗಳಲ್ಲಿ 20 ಹೊಸ ವಿಮಾನಗಳನ್ನು ಪ್ರಾರಂಭಿಸುವುದಾಗಿ ನೋ-ಫ್ರಿಲ್ಸ್ ಕ್ಯಾರಿಯರ್ ಸ್ಪೈಸ್ ಜೆಟ್ ತಿಳಿಸಿದೆ.
ಮಾರ್ಚ್ 29 ರಿಂದ ಅಮೃತಸರ್, ವಾರಣಾಸಿ ಮತ್ತು ಗುವಾಹಟಿಯಿಂದ ಪಾಟ್ನಾಗೆ ಸೇವೆಗಳು ಪ್ರಾರಂಭವಾಗಲಿವೆ. ಪ್ರಾದೇಶಿಕ ಸಂಪರ್ಕ ಯೋಜನೆ (ಆರ್‌ಸಿಎಸ್) ಅಡಿಯಲ್ಲಿ ಹೈದರಾಬಾದ್-ಮಂಗಳೂರು, ಬೆಂಗಳೂರು-ಜಬಲ್‌ಪುರ ಮತ್ತು ಮುಂಬೈ-ಔರಂಗಾಬಾದ್ ಮಾರ್ಗಗಳಲ್ಲಿಯೂ ವಿಮಾನಯಾನ ಪ್ರಾರಂಭಗೊಳ್ಳಲಿದೆ.
ಪ್ರತಿದಿನ ಈ ವಿಮಾನಗಳು ಹಾರಾಟ ನಡೆಸಲಿದ್ದು, ಬೋಯಿಂಗ್ 737-800 ಮತ್ತು ಬೊಂಬಾರ್ಡಿಯರ್ ಕ್ಯೂ-400 ವಿಮಾನಗಳು ಹಾರಾಟ ನಡೆಸಲಿವೆ. ಈ ಸೇವೆ ಪ್ರಮುಖ ಮಹಾನಗರಗಳು ಮತ್ತು ಸಣ್ಣ ನಗರಗಳ ನಡುವಿನ ಸಂಪರ್ಕವನ್ನು ಹೆಚ್ಚಿಸುತ್ತದೆ. ಈ ಹೊಸ ವಿಮಾನಗಳ ಪ್ರಾರಂಭದೊಂದಿಗೆ, ಆರ್‌ಸಿಎಸ್ ಯೋಜನೆಯಡಿ 12 ನಗರಗಳನ್ನು ಸಂಪರ್ಕಿಸುವ ಈ ವಿಮಾನಯಾನವು ಒಟ್ಟು 52 ವಿಮಾನಗಳನ್ನು ಹೊಂದಿರುತ್ತದೆ ಎಂದು ಸ್ಪೈಸ್ ಜೆಟ್ ತಿಳಿಸಿದೆ.
ಮುಂಬೈ-ಬಾಗ್ಡೋಗ್ರಾ ಮತ್ತು ಮುಂಬೈ-ಚೆನ್ನೈ ಮಾರ್ಗಗಳಲ್ಲಿ ಕ್ರಮವಾಗಿ ಎರಡನೇ ಮತ್ತು ಐದನೇ ವಿಮಾನ ಸೇರ್ಪಡೆಯೊಂದಿಗೆ ತನ್ನ ಕಾರ್ಯಾಚರಣೆಯನ್ನು ಹೆಚ್ಚಿಸಲಿದೆ. ಹೈದರಾಬಾದ್-ಮಂಗಳೂರು ಮತ್ತು ಗುವಾಹಟಿ-ದೆಹಲಿ ವಲಯಗಳು ಬೇಸಿಗೆ ವೇಳಾಪಟ್ಟಿಯಲ್ಲಿ ಹೆಚ್ಚುವರಿ ಹಾರಾಟವನ್ನು ಹೊಂದಿವೆ ಎಂದು ಸ್ಪೈಸ್ ಜೆಟ್ ಮಾಹಿತಿ ನೀಡಿದೆ.
ಈ ಕುರಿತು ಸ್ಪೈಸ್ ಜೆಟ್ ಮುಖ್ಯ ವಾಣಿಜ್ಯ ಅಧಿಕಾರಿ ಶಿಲ್ಪಾ ಭಾಟಿಯಾ ಮಾತನಾಡಿ, ನಾವು 20 ಹೊಸ ದೇಶಿಯ ವಿಮಾನಗಳ ಉಡಾವಣೆಯನ್ನು ಘೋಷಿಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.