ಲಖನೌ: ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ಹೇಳಿರುವ ಲಖನೌ ಸಿಬಿಐ ವಿಶೇಷ ನ್ಯಾಯಾಲಯ, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿ ಹಿರಿಯ ನಾಯಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ, ಉಮಾ ಭಾರತಿ ಸೇರಿದಂತೆ ಎಲ್ಲಾ 32 ಆರೋಪಿಗಳು ದೋಷಮುಕ್ತ ಎಂದು ಲಖನೌದ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಪೂರ್ವಯೋಜಿತ ಕೃತ್ಯವಲ್ಲ ಮತ್ತು ಆರೋಪಿಗಳ ವಿರುದ್ಧ ಯಾವುದೇ ನಿರ್ಣಾಯಕ ಪುರಾವೆಗಳಿಲ್ಲ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.
1992ರ ಡಿಸೆಂಬರ್ 6ರಂದು ನಿಗದಿಯಾಗಿದ್ದ ‘ಕರಸೇವಾ’ ಅಥವಾ ಪವಿತ್ರ ಸೇವೆಯಲ್ಲಿ ಭಾಗವಹಿಸಲು ದೇಶಾದ್ಯಂತ ವಿವಿಧೆಡೆಯಿಂದ ಬರುವ ಎಲ್ಲರಿಗೂ ಹೈಕೋರ್ಟ್ ಅನುಮತಿ ನೀಡಿತ್ತು. ಅಯೋಧ್ಯೆಯನ್ನು ತಲುಪಬಹುದಾದ ‘ಕರಸೇವಕರ’ ಸಂಖ್ಯೆಯನ್ನು ನ್ಯಾಯಾಲಯ ನಿರ್ಧರಿಸಲಿಲ್ಲ. ಕೆಲವು ಸಮಾಜ ವಿರೋಧಿ ಅಂಶಗಳಿಂದಾಗಿ, ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಬಾಬ್ರಿ ಮಸೀದಿಯನ್ನು ಕೆಡವಲಾಗಿತ್ತು.
ಘಟನೆಗೆ ಸಂಬಂಧಿಸಿದಂತೆ ಫೈಜಾಬಾದ್‌ನಲ್ಲಿ ಒಂದೇ ದಿನದಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು. ಮೊದಲ ಎಫ್‌ಐಆರ್ ಹೆಸರು ಸೂಚಿಸದ ಲಕ್ಷಾಂತರ ಕರಸೇವಕರ ವಿರುದ್ಧ ದಾಖಲಾಗಿದ್ರೆ. ಎರಡನೇ ಎಫ್‌ಐಆರ್ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಬಾಳ್ ಠಾಕ್ರೆ, ಉಮಾ ಭಾರತಿ ಮತ್ತು ಇತರರು ಸೇರಿದಂತೆ 49 ಜನರ ವಿರುದ್ಧ ದಾಖಲಾಗಿತ್ತು. ಬಾಬ್ರಿ ಮಸೀದಿಯನ್ನು ಕೆಡವಲು ಸಂಚು ಮಾಡಿದ ಗಂಭೀರ ಆರೋಪ ಈ ಎಲ್ಲರ ಮೇಲಿತ್ತು.
28 ವರ್ಷಗಳ ಸುದೀರ್ಘ ವಿಚಾರಣೆಯ ಬಳಿಕ ಮಹತ್ವದ ತೀರ್ಪು ನೀಡಿರುವ ಲಖನೌ ಸಿಬಿಐ ವಿಶೇಷ ನ್ಯಾಯಾಲಯ ಎಲ್ಲರೂ ನಿರ್ದೋಷಿ ಎಂದಿದೆ.