ಇಡೀ ಜಗತ್ತನ್ನೇ ಕಾಡುತ್ತಿರುವ ಕೊರೊನಾ ವೈರಸ್ ಭಾರತದಲ್ಲೂ ಹೆಮ್ಮಾರಿಯಂತೆ ತನ್ನ ಕಬಂಧಬಾಹುಗಳನ್ನು ಚಾಚುತ್ತಿದೆ. ಇದನ್ನು ಕಟ್ಟಿಹಾಕಲು ಕೇಂದ್ರ ಸರ್ಕಾರ ಎರಡನೇ ಬಾರಿ ಲಾಕ್ಡೌನ್ ಆದೇಶ ಹೊರಡಿಸಿದೆ.
ಈ ಕಷ್ಟದ ಸಂದರ್ಭದಲ್ಲಿ ಸಿನಿಮಾ, ರಾಜಕೀಯ ಮತ್ತು ವ್ಯಾಪಾರ ವಲಯಗಳ ಪ್ರಮುಖರು ಸರ್ಕಾರವನ್ನು ಬೆಂಬಲಿಸಿ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಪ್ರಮುಖವಾಗಿ ಸಿನಿಮಾ ತಾರೆಯರು ಕೊರೊನಾ ವಿರುದ್ಧದ ಈ ಹೋರಾಟದಲ್ಲಿ ಸಾಮಾಜಿಕ ಜಾಲತಾಣವನ್ನು ವೇದಿಕೆಯಾಗಿಸಿಕೊಂಡು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿ ಹತ್ತಿರವಾಗಿದ್ದಾರೆ. ಇತ್ತೀಚೆಗೆ, ಎಲ್ಲಾ ಚಲನಚಿತ್ರೋದ್ಯಮದ ದಿಗ್ಗಜ ತಾರೆಯರು 'ಫ್ಯಾಮಿಲಿ' ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಪ್ರಸೂನ್ ಪಾಂಡೆ ನಿರ್ದೇಶನದ ಈ ಕಿರುಚಿತ್ರ ಹೆಚ್ಚು ಮೆಚ್ಚುಗೆಗೆ ಪಾತ್ರವಾಗಿದೆ. ಇದರಿಂದ ಪ್ರೇರಿತರಾಗಿರುವ ದಕ್ಷಿಣ ಭಾರತದ ಧಾರಾವಾಹಿ ತಾರೆಯರು ಸಹ ಕಿರುಚಿತ್ರ ಮಾಡಿದ್ದಾರೆ. ಈ ಕಿರುಚಿತ್ರದ ಮತ್ತೊಂದು ವೈಶಿಷ್ಟ್ಯವೆಂದರೆ ಅವರೆಲ್ಲರೂ ಮನೆಯಲ್ಲಿದ್ದುಕೊಂಡೇ ಈ ಶಾರ್ಟ್ ಫಿಲ್ಮ್ ಮಾಡಿರೋದು.
ದಕ್ಷಿಣದ ಧಾರವಾಹಿ ತಾರೆಗಳಾದ ಯಮುನಾ, ಜಯಲಲಿತಾ, ಶುಭಲೇಖ ಸುಧಾಕರ್, ಪ್ರಭಾಕರ್, ಸಮೀರ್, ಜಾಕಿ, ಅರ್ಚನಾ, ಕೌಶಿಕ್, ನಿರುಪಮ್, ಗೆಟಪ್ ಶ್ರೀನು ಸೇರಿದಂತೆ 34 ಮಂದಿ ಸೀರಿಯಲ್ ನಟರನ್ನು 29 ಮನೆಗಳಲ್ಲಿ 29 ಮೊಬೈಲ್ ಕ್ಯಾಮರಾಗಳೊಂದಿಗೆ ಚಿತ್ರೀಕರಿಸಲಾಗಿದೆ. ರವಿಕಿರಣ್ ಕಿರುಚಿತ್ರವನ್ನು ನಿರ್ದೇಶಿಸಿದ್ದು, 5 ಭಾಷೆಗಳನ್ನು ಕಿರುಚಿತ್ರ ಒಳಗೊಂಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.