ಭುವನೇಶ್ವರ: ಅಂಧ ದಂಪತಿಗೆ ವಿದ್ಯುತ್ ಇಲಾಖೆ ಬರೋಬ್ಬರಿ 58 ಲಕ್ಷ ರೂಪಾಯಿಯ ವಿದ್ಯುತ್ ಬಿಲ್ ನೀಡಿರುವುದು ವರದಿಯಾಗಿದೆ.
ನಗರದ ಏರ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ಪಂಚ್ಗಾಂವ್ನ ನಿವಾಸಿ ಪ್ರಸನ್ನ ನಾಯಕ್ ಕುಟುಂಬ ಮನೆಯಲ್ಲಿ ಎರಡು ಸೀಲಿಂಗ್ ಫ್ಯಾನ್ ಮತ್ತು ನಾಲ್ಕು ಎಲ್ಇಡಿ ಬಲ್ಬ್ ಮಾತ್ರ ಬಳಸುತ್ತಿದ್ದಾರೆ. ಆದರೆ, ವಿದ್ಯುತ್ ಇಲಾಖೆ ಲಕ್ಷಾಂತರ ರೂಪಾಯಿ ಬಿಲ್ ನೀಡಿದೆ. ಮಾಹಿತಿಯ ಪ್ರಕಾರ ಕಳೆದ ವರ್ಷ ಸೆಪ್ಟೆಂಬರ್ನಲ್ಲೂ ಕೂಡ ಇದೇ ರೀತಿ ದಂಪತಿಗೆ ವಿದ್ಯುತ್ ಇಲಾಖೆ 18,845 ರೂ. ಬಿಲ್ ನೀಡಿತ್ತು. ಬಳಿಕ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಕೊನೆಗೆ 9,700 ರೂ. ಬಿಲ್ ಪಾವತಿಸಿದ್ದರು.
2019ರ ಡಿಸೆಂಬರ್ನಲ್ಲಿ ಪ್ರಸನ್ನ ನಾಯಕ್ ಮನೆಗೆ ಇಲಾಖೆ ಹೊಸ ಮೀಟರ್ ಆಳವಡಿಸಿತ್ತು. ಆ ಬಳಿಕ ಈವರೆಗೆ ಒಂದೂ ಬಿಲ್ ನೀಡಿರಲಿಲ್ಲ. ಆದರೆ, ಇದೀಗ ಕಳೆದ ಡಿಸೆಂಬರ್ನಿಂದ ಜುಲೈವರೆಗೆ 58 ಲಕ್ಷ ರೂಪಾಯಿ ಬಿಲ್ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಸನ್ನ ನಾಯಕ್ ಸಹೋದರ ಅಜಯ್ ನಾಯಕ್, ಅಷ್ಟೊಂದು ದೊಡ್ಡ ಮೊತ್ತ ಪಾವತಿಸಲು ನಮ್ಮಿಂದ ಸಾಧ್ಯವಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡುತ್ತೇವೆ. ಸಮಸ್ಯೆ ಪರಿಹರಿಸದಿದ್ದರೆ, ಗ್ರಾಹಕರ ನ್ಯಾಯಾಲಯವನ್ನು ಸಂಪರ್ಕಿಸುತ್ತೇವೆ ಎಂದು ಹೇಳಿದ್ದಾರೆ.