ಭೋಪಾಲ್ (ಮಧ್ಯಪ್ರದೇಶ): 2019 ರ ಲೋಕಸಭಾ ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯವರ ನಕಲಿ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಎಫ್‌ಐಆರ್ ದಾಖಲಿಸುವುದಾಗಿ ಹಿರಿಯ ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಹಿಂದಿನ ಕಮಲ್ ನಾಥ್ ಸರ್ಕಾರದ ಮದ್ಯ ನೀತಿ ಕುರಿತು ಚೌಹಾಣ್, ಎಡಿಟೆಡ್ ವಿಡಿಯೋ ಕ್ಲಿಪ್ ಅನ್ನು ಪ್ರಸಾರ ಮಾಡಿದ್ದಕ್ಕಾಗಿ ಸಿಂಗ್ ಮತ್ತು ಇತರ 11 ಜನರ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಅದೇ ಪೊಲೀಸ್ ಠಾಣೆಯಲ್ಲಿ ಟ್ವೀಟ್ ನಲ್ಲಿ ನಕಲಿ ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ನಾನು ಶಿವರಾಜ್ ವಿರುದ್ಧ ಎಫ್ಐಆರ್ ದಾಖಲಿಸುತ್ತೇನೆ. ಅಲ್ಲಿ ಬಿಜೆಪಿ ನಾಯಕರು ನನ್ನ ವಿರುದ್ಧ ಎಫ್ಐಆರ್ ದಾಖಲಿಸಲು ಹೋಗಿದ್ದರು ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
2019, ಮೇ 16 ರ ಚೌಹಾಣ್ ಅವರ ಟ್ವೀಟ್ ಹೊಂದಿರುವ ಸುದ್ದಿಯನ್ನು ಇದಕ್ಕೆ ಲಗತ್ತಿಸಿದ್ದಾರೆ. ಸಿಂಗ್ ಟ್ಯಾಗ್ ಮಾಡಿದ ಸುದ್ದಿಯಲ್ಲಿ ರಾಹುಲ್ ಗಾಂಧಿಯವರ ಮೂಲ ಭಾಷಣದ ಲಿಂಕ್ ಕೂಡ ಇದೆ.