ಮುಂಬೈ: ಇವತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ಜಗತ್ತು ಮುಕ್ತವಾಗಿ ಯೋಚನೆ ಮಾಡುವಂತಾಗಿದೆ. ಮುಖ್ಯವಾಹಿನಿ ಸಿನಿಮಾ ಉದ್ಯಮವು ಸಹ ಅವರ ಬಗ್ಗೆ ಸಕಾರಾತ್ಮಕವಾಗಿ ಬಿಂಬಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಖ್ಯಾತ ನಟಿ ಶಬಾನಾ ಆಜ್ಮಿ ಹೇಳಿದ್ದಾರೆ.
1996 ರಲ್ಲಿ ದೀಪಾ ಮೆಹ್ತಾ ನಿರ್ಮಾಣದ ಫೈರ್ ಸಿನಿಮಾದಲ್ಲಿ ಶಬಾನಾ ನಟಿಸಿದ್ದರು. ತನ್ನ ಅತ್ತಿಗೆಯೊಂದಿಗೆಯೇ ಪ್ರೀತಿಯ ಸಂಬಂಧ ಬೆಳೆಸುವ ಏಕಾಂಗಿ ಮಹಿಳೆಯ ಪಾತ್ರವನ್ನು ಶಬಾನಾ ನಿರ್ವಹಿಸಿದ್ದರು.
ಈ ಸಿನಿಮಾ ಮಾಡಿದ ನಂತರ ಲಂಡನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಭಾಗವಹಿಸಲು ತೆರಳಿದಾಗ ನೀವು ಮೂವರೂ ಸಲಿಂಗ ಕಾಮಿಗಳೇ? ಎಂದು ಅಲ್ಲಿ ನೆರೆದಿದ್ದವರು ಇವರನ್ನು ಪ್ರಶ್ನಿಸಿದ್ದನ್ನು ಶಬಾನಾ ಇದೇ ಸಂದರ್ಭದಲ್ಲಿ ಸ್ಮರಿಸಿದರು.
'ಆದರೆ ಇವತ್ತು ಕಾಲ ಬದಲಾಗಿದೆ. ಈ ಮುನ್ನ ಬರೀ ಮೂದಲಿಕೆ ಹಾಗೂ ತಮಾಷೆಯ ವಸ್ತುವಾಗಿದ್ದ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಇವತ್ತು ಚಿತ್ರರಂಗವು ಸಹಾನುಭೂತಿಯಿಂದ ನೋಡುತ್ತಿರುವುದು ಸ್ವಾಗತಾರ್ಹ' ಎಂದು ಶಬಾನಾ ನುಡಿದರು.
ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಶಬಾನಾ ಆಜ್ಮಿ ಸಲಿಂಗ ಕಾಮಿಗಳ ಸಮುದಾಯದ ಕುರಿತು ಹಲವಾರು ವಿಚಾರಗಳನ್ನು ಇತ್ತೀಚೆಗೆ ಹಂಚಿಕೊಂಡರು.
'ಯಾವುದೇ ಒಂದು ವಿಷಯದ ಬಗ್ಗೆ ಸಮಾಜದಲ್ಲಿ ಅಥವಾ ಚಲನಚಿತ್ರಗಳಲ್ಲಿನ ಸಂವಾದ ಆರಂಭಿಸುವಂತೆ ಮಾಡುವುದು ಮೊದಲ ಹೆಜ್ಜೆಯಾಗಿದೆ. ಫೈರ್ ಸಿನಿಮಾದಲ್ಲಿನ ಅತ್ತಿಗೆ-ನಾದಿನಿಯ ಸಂಬಂಧದ ಬಗ್ಗೆ ಪ್ರೇಕ್ಷಕರು ಸಹಾನುಭೂತಿಯಿಂದ ನೋಡಲಾರಂಭಿಸಿದರು. ನಂತರ ಆ ಸಹಾನುಭೂತಿಯನ್ನು ಅವರು ಬೇರೊಂದು ವರ್ಣ, ಜಾತಿ, ದೇಶ ಹಾಗೂ ಮತ್ತೊಂದು ವಿಚಾರಧಾರೆಯತ್ತಲೂ ಬೆಳೆಸಿಕೊಂಡರು. ಯಾರ ಬಗ್ಗೆ ನಿಮಗೆ ಗೊತ್ತಿಲ್ಲವೋ ಅವರನ್ನು ನೀವು ಕೆಟ್ಟದಾಗಿ ಬಿಂಬಿಸುತ್ತೀರಿ. ಇದು ಸರಿಯಲ್ಲ' ಎಂದು ಆಜ್ಮಿ ಹೇಳಿದರು.
ಪ್ರಸ್ತುತ 'ಶೀರ್ ಕೋರ್ಮಾ' ಎಂಬ ಚಲನಚಿತ್ರದಲ್ಲಿ ಶಬಾನಾ ಆಜ್ಮಿ ಅಭಿನಯಿಸಿದ್ದು, ಇದೂ ಸಹ ಇಬ್ಬರು ಸಲಿಂಗಕಾಮಿ ಹೆಣ್ಣು ಮಕ್ಕಳ ಮಧ್ಯದ ಕಥೆಯನ್ನು ಒಳಗೊಂಡಿದೆ. ಸ್ವರಾ ಭಾಸ್ಕರ್ ಹಾಗೂ ದಿವ್ಯಾ ದತ್ತಾ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಫೈರ್ ಸಿನಿಮಾ ಮಾಡಿದ ನಂತರ ಈಗ ಫರಾಜ್ ಆರಿಫ್ ಅನ್ಸಾರಿ ನಿರ್ದೇಶನದ ಶೇರ್ ಕೋರ್ಮಾ ಸಿನಿಮಾದಲ್ಲಿ ನಟಿಸುತ್ತಿರುವುದು ಮತ್ತೊಂದು ಹಂತದ ತಾರ್ಕಿಕ ಅಂತ್ಯದೆಡೆಗೆ ಸಾಗಿದಂತಾಗಿದೆ ಎಂದು ಶಬಾನಾ ಹೇಳಿದ್ದಾರೆ.
'ಖಂಡಿತವಾಗಿಯೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ಬರುತ್ತಿದೆ. ಹಾಗೆಯೇ ಈ ಬದಲಾವಣೆ ಎದ್ದು ಕಾಣುತ್ತಿದೆ ಕೂಡ. ಮುಖ್ಯ ವಾಹಿನಿಯ ಸಿನಿಮಾಗಳಲ್ಲೂ ಸಹ ಈ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದವರ ಬಗ್ಗೆ ಸಕಾರಾತ್ಮಕವಾಗಿ ಬಿಂಬಿತವಾಗುತ್ತಿರುವುದು ಈ ಮುಂಚಿಗಿಂತಲೂ ಹೆಚ್ಚಾಗಿ ಕಾಣಿಸುತ್ತಿದೆ.'
'ಕುಟುಂಬದ ಪರಿಭಾಷೆ ಇವತ್ತು ಬದಲಾಗುತ್ತಿದ್ದು, ಪತಿ, ಪತ್ನಿ ಹಾಗೂ ಮಗು ಮಾತ್ರ ಇವತ್ತು ಪರಿವಾರವಲ್ಲ. ಇಬ್ಬರು ಮಹಿಳೆಯರು ಮಗು ಪಡೆಯುತ್ತಿದ್ದಾರೆ, ಇಬ್ಬರು ಪುರುಷರು ಮಗು ಪಡೆಯುತ್ತಿದ್ದಾರೆ. ಅಷ್ಟೇ ಏಕೆ ಏಕಾಂಗಿ ಮಹಿಳೆಯರು ಸಹ ಮಕ್ಕಳನ್ನು ಪಡೆಯುತ್ತಿರುವ ಈ ಸಮಯದಲ್ಲಿ ಪರಿವಾರದ ಪರಿಭಾಷೆ ಸಂಪೂರ್ಣ ಬದಲಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.'
69 ವರ್ಷ ವಯಸ್ಸಾಗಿರುವ ಶಬಾನಾ ಆಜ್ಮಿ ಈ ಚಿತ್ರದಲ್ಲಿ ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತನ್ನ ಮಗಳ ಬೇರೊಂದು ರೀತಿಯ ಲೈಂಗಿಕ ಕಾಮನೆಗಳ ಬಗ್ಗೆ ಮನದಲ್ಲೇ ತುಮುಲವೇರ್ಪಟ್ಟು ಅಂಥದೊಂದು ಸನ್ನಿವೇಶಕ್ಕೆ ಹೊಂದಿಕೊಳ್ಳುವ ವೃದ್ಧ ತಾಯಿಯ ಪಾತ್ರ ಇದಾಗಿದೆ.
'ಇದನ್ನೆಲ್ಲ ತಡೆದುಕೊಳ್ಳಲಾರೆ' ಎಂದು ಓರ್ವ ಮಹಿಳೆಯಾಗಿ ಹೇಳಿಕೊಳ್ಳದ ಪಾತ್ರ ಇಲ್ಲಿದೆ. ಬದಲಾದ ಸನ್ನಿವೇಶಕ್ಕೆ ಹೊಂದಿಕೊಳ್ಳಲು ಯತ್ನಿಸಿದರೂ, ಇಷ್ಟು ದಿನ ಇದೆಲ್ಲ ಅದಾವುದೋ ದೇಶದಲ್ಲಿತ್ತು. ಈಗ ಮಗಳೇ ಇದನ್ನೆಲ್ಲ ಮನೆಯೊಳಗೇ ತಂದು ಬಿಟ್ಟಳಲ್ಲ ಎಂಬ ದುಗುಡದಲ್ಲಿ ತಾಯಿಯು ವಾಸ್ತವತೆಯನ್ನು ಅರ್ಥ ಮಾಡಿಕೊಳ್ಳುತ್ತ ಹೋಗುವುದು ಚಿತ್ರಕಥೆಯ ಭಾಗವಾಗಿದೆ.
'ತಮ್ಮ ಮಕ್ಕಳು ಸಲಿಂಗಕಾಮಿಗಳೆಂಬುದನ್ನು ಒಪ್ಪುವುದು ಬಹುತೇಕ ಪಾಲಕರಿಗೆ ಸಾಧ್ಯವಾಗದು. ಆದರೂ ಕೊನೆಗೆ ತಾಯಿಯ ಪ್ರೀತಿಯಿಂದಾಗಿ ಮಕ್ಕಳನ್ನು ಒಪ್ಪಿಕೊಳ್ಳುವಂತಾಗುತ್ತದೆ.'
ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಬಾಲಿವುಡ್ ಬಹಳ ಕಾಲದಿಂದಲೂ ತಪ್ಪಾಗಿ ಬಿಂಬಿಸುತ್ತ ಬಂದಿದೆ. ಜನರ ಮನಸ್ಸಿನಲ್ಲಿ ಇವರ ಬಗ್ಗೆ ತಪ್ಪು ಕಲ್ಪನೆ ಮೂಡುವಂತೆ ಮಾಡಿರುವುದರಲ್ಲಿ ಬಾಲಿವುಡ್ ಚಿತ್ರಗಳ ಪಾಲು ಅಧಿಕವಾಗಿದೆ.
'ಸಮಾಜದಲ್ಲಿ ವಿಭಿನ್ನವಾಗಿ ಕಾಣುವವರನ್ನು ಈ ಸಮಾಜ ವಿಚಿತ್ರವಾಗಿ ನೋಡಲಾರಂಭಿಸುತ್ತದೆ. ಹೀಗಾಗಿಯೇ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವನ್ನು ಸಮಾಜ ಬೇಗನೆ ಒಪ್ಪಿಕೊಳ್ಳುತ್ತಿಲ್ಲ. ಯಾರೇ ಆದರೂ ವಿಭಿನ್ನವಾಗಿ ಬದುಕಲು ಬಯಸಿದರೆ ಅವರನ್ನು ಹೊರಗಿನವರನ್ನಾಗಿ ನೋಡಲಾಗುತ್ತದೆ.' ಎನ್ನುತ್ತಾರೆ ಶಬಾನಾ ಆಜ್ಮಿ.
ಸಲಿಂಗಕಾಮ ಸಮುದಾಯದವರ ಬಗ್ಗೆ ತಮ್ಮ ಜೀವನದಲ್ಲಿ ನಡೆದ ಘಟನೆಯೊಂದನ್ನು ಇದೇ ಸಂದರ್ಭದಲ್ಲಿ ಶಬಾನಾ ಸ್ಮರಿಸಿದರು. ಅಮೆರಿಕೆಗೆ ತೆರಳಿದ ಸಂದರ್ಭವೊಂದರಲ್ಲಿ ಓರ್ವ ಸಲಿಂಗಕಾಮಿ ಪರಿಚಯದವನೋರ್ವ ತಮ್ಮನ್ನು ಕರೆದೊಯ್ಯಲು ಏರ್ಪೋರ್ಟ್ಗೆ ಬಂದಿದ್ದ. ಆದರೆ ಆತ ಉದ್ದನೆಯ ಬಣ್ಣದ ಜಾಕೆಟ್ಟು, ಡೈಮಂಡ್ ನೆಕ್ಲೆಸ್, ಐಲೈನರ್ ಎಲ್ಲ ಧರಿಸಿದ್ದ. 'ನೀವು ಸಾಮಾನ್ಯವಾದ ಉತ್ತಮ ಪೋಷಾಕು ತೊಟ್ಟಿದ್ದರೆ ಚೆನ್ನಾಗಿತ್ತು' ಎಂದು ಶಬಾನಾ ಆತನಿಗೆ ನೇರವಾಗಿಯೇ ಹೇಳಿದ್ದರಂತೆ.
ಇದಕ್ಕೆ ಆತ 'ನನ್ನಂತೆ ನಾನು ಉಸಿರಾಡಲು ಬಿಡು' ಎಂದಿದ್ದ. ಅದಕ್ಕೆ 'ಇದು ನೀನು ಉಸಿರಾಡುವ ವಿಷಯವಲ್ಲ. ಆದರೆ ಬೇರೆಯವರ ಗಮನ ಸೆಳೆಯುವ ತಂತ್ರ' ಎಂದಿದ್ದರಂತೆ ಶಬಾನಾ.
ಆದರೆ ಪಟ್ಟು ಬಿಡದ ಆ ಸಲಿಂಗಕಾಮಿ ಪರಿಚಯಸ್ಥ 'ನಿನಗೆ ಹಾಗನ್ನಿಸಬಹುದು. ಆದರೆ ನಾನು ಹೀಗೆ ಬದುಕಲು ಇಷ್ಟ ಪಡುವೆ, ಅಷ್ಟೇ' ಎಂದಿದ್ದ. ನಾವು ದಿನಿನಿತ್ಯ ನೋಡುವುದನ್ನು ಬಿಟ್ಟು ಬೇರೆ ಏನನ್ನಾದರೂ ನೋಡಿದಲ್ಲಿ ಅದರ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುವುದು ಎಷ್ಟೊಂದು ಸಹಜವಾಗಿದೆಯಲ್ಲ ಎಂಬುದು ಈ ಘಟನೆಯ ನಂತರ ನನ್ನ ಗಮನಕ್ಕೆ ಬರಲಾರಂಭಿಸಿತು.
ಅಲ್ಪಸಂಖ್ಯಾತ ಹಾಗೂ ತುಳಿಯಲ್ಪಟ್ಟ ವರ್ಗದ ಜನತೆ ಸಮಾಜದ ಮುಖ್ಯವಾಹಿನಿಗೆ ಬರಲು ಗಂಭೀರ ಪ್ರಯತ್ನಗಳನ್ನು ಮಾಡಬೇಕಿದೆ. ಇದೇ ಕಾರಣಕ್ಕಾಗಿಯೇ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ತನ್ನದೇ ಆದ ಫ್ಯಾಷನ್, ಕಲೆ ಹಾಗೂ ಸಂಸ್ಕೃತಿಗಳನ್ನು ಬೆಳೆಸಿಕೊಳ್ಳುತ್ತಿದೆ ಎನಿಸುತ್ತದೆ ಎನ್ನುತ್ತಾರೆ ಶಬಾನಾ ಆಜ್ಮಿ.
'ಯಾವಾಗ ನೀವು ಸಾಮಾಜಿಕವಾಗಿ ಬದಲಾಗುವಿರೋ ಆಗ ಇತರರ ಗಮನ ನಿಮ್ಮತ್ತ ಸೆಳೆಯಲು ಏನಾದರೂ ಮಾಡಬೇಕಾಗುತ್ತದೆ. ಇದೇ ಕಾರಣಕ್ಕೆ ಲೈಂಗಿಕ ಅಲ್ಪಸಂಖ್ಯಾತ ಸಮುದಾಯವು ವಿಭಿನ್ನವಾಗಿ ವೇಷ-ಭೂಷಣ ಧರಿಸುತ್ತಿದ್ದು, ಇದರಿಂದ ಅವರಿಗೆ ಒಂದು ರೀತಿಯ ಸುರಕ್ಷತಾ ಭಾವನೆ ಮೂಡುತ್ತದೆ. ಇಷ್ಟಕ್ಕೂ ಅವರಿಷ್ಟದ ವೇಷ-ಭೂಷಣ ಧರಿಸಲು ಯಾರಾದರೂ ಏಕೆ ಅಡ್ಡಿ ಮಾಡಬೇಕು?'
ಬಾಲಿವುಡ್ ಚಲನಚಿತ್ರಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಅವರ ಲೈಂಗಿಕತೆ ಬಿಟ್ಟು ಮತ್ತೇನೂ ತೋರಿಸದೆ ಏಕಪಕ್ಷೀಯವಾಗಿ ಬಿಂಬಿಸಲಾಗುತ್ತಿದೆ. ಕೇವಲ ಅವರನ್ನು ಅವರ ಲೈಂಗಿಕ ಆಸಕ್ತಿಯ ವಿಭಿನ್ನತೆಯಿಂದಲೇ ಸಮಾಜದಲ್ಲಿ ಗುರುತಿಸುವ ಮನೋಭಾವನೆ ಬದಲಾಗಬೇಕಿದೆ.
ಮಾರ್ಚ್ 21 ರಂದು ಲಂಡನ್ನಲ್ಲಿ ನಡೆಯಲಿರುವ ಬಿಎಫ್ಐ ಚಲನಚಿತ್ರ ಸಮ್ಮೇಳನದಲ್ಲಿ ಶೇರ್ ಕೋರ್ಮಾ ಸಿನಿಮಾ ಪ್ರದರ್ಶನಗೊಳ್ಳಲಿದ್ದು, ಚಿತ್ರದಲ್ಲಿನ ತಮ್ಮ ಪಾತ್ರವು ಪ್ರೇಕ್ಷಕರಲ್ಲಿ ಹೊಸದೊಂದು ಚರ್ಚೆಯನ್ನು ಹುಟ್ಟುಹಾಕಲಿದೆ ಎಂಬ ವಿಶ್ವಾಸದಲ್ಲಿದ್ದಾರೆ ಶಬಾನಾ.