ನವದೆಹಲಿ : ಮಾಧ್ಯಮಗಳಲ್ಲಿ ಹಥ್ರಾಸ್ ಸಂತ್ರಸ್ತೆಯ ಛಾಯಾಚಿತ್ರ ಪ್ರಕಟಿಸುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ನ್ಯಾಯಾಲಯವು ಇದರ ಬಗ್ಗೆ ಕಾನೂನು ರೂಪಿಸಲು ಸಾಧ್ಯವಿಲ್ಲ ಮತ್ತು ಅರ್ಜಿದಾರರು ಈ ವಿಷಯದಲ್ಲಿ ಸರ್ಕಾರಕ್ಕೆ ಪ್ರಾತಿನಿಧ್ಯ ನೀಡಬಹುದು ಎಂದು ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ನ್ಯಾಯಪೀಠ ಹೇಳಿದೆ.
ಈ ವಿಷಯಗಳಿಗೆ ಕಾನೂನಿನೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಅನಿರುದ್ಧ ಬೋಸ್ ಅವರನ್ನೂಳಗೊಂಡ ನ್ಯಾಯಪೀಠ ಹೇಳಿದೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ.
ಇದಕ್ಕಾಗಿ ಸಾಕಷ್ಟು ಕಾನೂನುಗಳಿವೆ. ಇಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ. ಈ ಕುರಿತು ಅರ್ಜಿದಾರರು ಸರ್ಕಾರಕ್ಕೆ ಪ್ರಾತಿನಿಧ್ಯ ನೀಡಬಹುದು ಎಂದು ಅದು ಹೇಳಿದೆ.
19 ವರ್ಷದ ಯುವತಿಯ ಮೇಲೆ ಸೆಪ್ಟೆಂಬರ್ 14ರಂದು ಹಥ್ರಾಸ್ನಲ್ಲಿ ನಾಲ್ಕು ಪುರುಷರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಯುವತಿಯ ಮೃತದೇಹವನ್ನು ಆಕೆಯ ಹೆತ್ತವರ ಒಪ್ಪಿಗೆಯಿಲ್ಲದೆ ಪೊಲೀಸರು ಅಧಿಕಾರಿಗಳು ಶವಸಂಸ್ಕಾರ ಮಾಡಿದ್ದರು. ಇದು ಎಲ್ಲೆಡೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.