ಅಹಮದಾಬಾದ್: ಶಿವಸೇನೆ ಮುಖಂಡ ಸಂಜಯ್ ರಾವತ್ ಅಹಮದಾಬಾದ್ಅನ್ನು 'ಮಿನಿ ಪಾಕಿಸ್ತಾನ' ಎಂದು ಕರೆಯುವ ಮೂಲಕ ಗುಜರಾತ್ನ 'ಅಪಮಾನ ಮಾಡಿದ್ದಾರೆ' ಎಂದು ಆರೋಪಿಸಿರುವ ಬಿಜೆಪಿ, ಗುಜರಾತ್ ಮತ್ತು ಅಹಮದಾಬಾದ್ ಜನರಲ್ಲಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಮುಂಬೈನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಾವತ್, ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ಗೆ ಹೋಲಿಸಿದ ರೀತಿ ಅಹಮದಾಬಾದ್ಅನ್ನು 'ಮಿನಿ ಪಾಕಿಸ್ತಾನ'ಕ್ಕೆ ಹೋಲಿಸಲು ನಟಿ ಕಂಗನಾ ರಣಾವತ್ ಅವರಿಗೆ ಧೈರ್ಯವಿದೆಯೇ ಎಂದು ಕೇಳಿದ್ದರು.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ನಿಧನದ ನಂತರ ಮುಂಬೈ ಅಸುರಕ್ಷಿತ ಎಂದು ನಟಿ ಹೇಳಿದ್ದರಿಂದ ಸಂಜಯ್ ರಾವತ್ ಮತ್ತು ಕಂಗನಾ ನಡುವೆ ವಾಕ್ಸಮರ ನಡೆಯುತ್ತಿದೆ.
'ಮುಂಬೈಯನ್ನು 'ಮಿನಿ ಪಾಕಿಸ್ತಾನ' ಎಂದು ಕರೆದಿದ್ದಕ್ಕಾಗಿ ಆ ಹುಡುಗಿ ಮುಂಬೈ ಮತ್ತು ಮಹಾರಾಷ್ಟ್ರಕ್ಕೆ ಕ್ಷಮೆಯಾಚಿಸಿದರೆ, ನಾನು ಅದರ ಬಗ್ಗೆ ಯೋಚಿಸುತ್ತೇನೆ. ಅಹಮದಾಬಾದ್ ಬಗ್ಗೆ ಅದೇ ರೀತಿ ಹೇಳುವ ಧೈರ್ಯ ಅವಳಿಗೆ ಇದೆಯೇ' ಎಂದು ಪ್ರಶ್ನಿಸಿದ್ದಾರೆ.
ರಾವತ್ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ, ಸಂಜಯ್ ರಾವತ್ ಅಹಮದಾಬಾದ್ಅನ್ನು ಮಿನಿ ಪಾಕಿಸ್ತಾನ ಎಂದು ಕರೆಯುವ ಮೂಲಕ ರಾಜ್ಯವನ್ನು ಅವಮಾನಿಸಿದ್ದಾರೆ. 'ಅವರು ಗುಜರಾತ್, ಅಹಮದಾಬಾದ್ ಜನರಲ್ಲಿ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದ್ದಾರೆ.