ನಾಗ್ಪುರ (ಮಹಾರಾಷ್ಟ್ರ) : ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ನಡೆದ ದಸರಾ ಕಾರ್ಯಕ್ರಮದಲ್ಲಿ ಮಾತನಾಡಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್, ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದ ಪ್ರಮುಖ ಘಟನೆಗಳನ್ನು ನೆನಪಿಸಿಕೊಂಡರು.
ಕಳೆದ ವರ್ಷ ದಸರಾ ಕಾರ್ಯಕ್ರಮಕ್ಕೆ ಮುಂಚಿತವಾಗಿ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ಸಂಸತ್ತಿನಲ್ಲಿ ರದ್ದುಪಡಿಸಲಾಗಿತ್ತು. 2019 ನವೆಂಬರ್ 9ರಂದು ಸುಪ್ರೀಂಕೊರ್ಟ್ ತೀರ್ಪು ನೀಡಿದ ಬಳಿಕ, ಬೃಹತ್ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ರಾಮ ಮಂದಿರ ಶಿಲಾನ್ಯಾಸ ಸಮಾರಂಭ ವೇಳೆ ನಾವು ಭಾರತೀಯರ ತಾಳ್ಮೆ ಮತ್ತು ಸಂವೇದನೆಗೆ ಸಾಕ್ಷಿಯಾಗಿದ್ದೇವೆ. ಪೌರತ್ವ ತಿದ್ದುಪಡಿ ಕಾಯ್ದೆ ( ಸಿಎಎ)ಯ ಕಾನೂನು ಬದ್ದ ಅಂಗೀಕಾರವೂ ಆಯ್ತು ಎಂದು ಮಹರ್ಷಿ ವ್ಯಾಸ್‌ನಲ್ಲಿ ನಡೆದ ದಸರಾ ಸಮಾರಂಭದಲ್ಲಿ ಭಾಗವತ್ ಸ್ಮರಿಸಿದರು.
ಸಿಎಎ ಹೋರಾಟದ ಸಂದರ್ಭವನ್ನು ಬಳಸಿಕೊಂಡ ಅವಕಾಶವಾದಿಗಳು ಪ್ರತಿಭಟನೆಯ ಹೆಸರಿನಲ್ಲಿ ಸಂಘಟಿತ ಹಿಂಸಾಚಾರವನ್ನು ನಡೆಸಿದರು. ಆದರೆ, ಸಿಎಎ ಯಾವುದೇ ನಿರ್ದಿಷ್ಟ ಸಮುದಾಯದ ವಿರೋಧಿಯಲ್ಲ. ಸಿಎಎ ಮುಸ್ಲಿಮರ ವಿರೋಧಿ ಎಂದು ಸುಳ್ಳು ಪ್ರಚಾರ ನಡೆಸಿದ ಕೆಲವರು, ನಮ್ಮ ಮುಸ್ಲಿಂ ಸಹೋದರರ ದಾರಿ ತಪ್ಪಿಸುವ ಪ್ರಯತ್ನ ಮಾಡಿದರು. ಅವಕಾಶವಾದಿಗಳು ಇದೇ ಸಮಯವನ್ನು ಬಳಸಿಕೊಂಡು ಪ್ರತಿಭಟನೆಯ ಹೆಸರಿಲ್ಲಿ ಹಿಂಸಾಚಾರ ನಡೆಸಿದರು. ಆದರೆ, ಇವೆಲ್ಲದರ ಬಗ್ಗೆ ಚರ್ಚಿಸುವ ಮೊದಲೇ ಕೊರೊನಾ ವೈರಸ್ ಆವರಿಸಿಕೊಂಡಿತು. ಹೀಗಾಗಿ, ಕೆಲವರ ಮನಸ್ಸಿನಲ್ಲಿ ಕೋಮು ಜ್ವಾಲೆ ಇನ್ನೂ ಇದೆ, ಇದರಿಂದ ಸಂಘರ್ಷ ಮುಂದುವರೆದಿದೆ ಎಂದರು.
ಭಾರತ- ಚೀನಾ ಗಡಿ ವಿವಾದದ ಬಗ್ಗೆ ಮಾತನಾಡಿದ ಅವರು, ಚೀನಾ ಭಾರತದ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುವ ಮೂಲಕ ತಗಾದೆ ತೆಗೆದಿತ್ತು. ಅವರ ಪ್ರಯತ್ನಗಳಿಗೆ ಸರ್ಕಾರ ಮತ್ತು ಜನ ತಕ್ಕ ಉತ್ತರ ನೀಡಿದ್ದಾರೆ ಎಂದರು. ಆರೆಸ್ಸೆಸ್ ಪ್ರಮುಖಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೋವಿಡ್ ಹಿನ್ನೆಲೆ ಕೇವಲ 50 ಜನರಿಗೆ ಮಾತ್ರ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿತ್ತು.