ಚೆನ್ನೈ : ಯೂಟ್ಯೂಬ್ನಲ್ಲಿ ಮುರುಗನ್ ದೇವರ ಕುರಿತು ಅವಹೇಳನಕಾರಿ ವಿಡಿಯೋ ಪ್ರಕಟಿಸಿದ ಚಾನೆಲ್ ವಿರುದ್ಧ ಕ್ರಮಕ್ಕೆ ಮುಂದಾದ ಸರ್ಕಾರದ ನಡೆಯನ್ನು ಸೂಪರ್ ಸ್ಟಾರ್ ರಜಿನಿಕಾಂತ್ ಸ್ವಾಗತಿಸಿದ್ದಾರೆ.
ಅಲ್ಲದೆ ಧರ್ಮ ಅಸಹಿಷ್ಣುತೆ ಹಾಗೂ ದೇವರ ಬಗ್ಗೆ ಅವಹೇಳನ ಮಾಡುವುದು ಇಲ್ಲಿಗೆ ನಿಲ್ಲಬೇಕು ಎಂದು ಟ್ವೀಟ್ ಮಾಡಿದ್ದಾರೆ. ಭಗವಂತನ ಪ್ರಾರ್ಥಿಸುವ ತಮಿಳು ಸ್ತೋತ್ರವಾದ ‘ಕಂದಾ ಶಷ್ಟಿ ಕವಚಮ್’ ಕುರಿತಾದ ಅವಹೇಳನವು ಕೋಟಿ ತಮಿಳಿಗರ ಮನಸ್ಸನ್ನು ನೋಯಿಸಿದೆ ಎಂದಿದ್ದಾರೆ.
ವಿವಾದಕ್ಕೊಳಗಾದ ವಿಡಿಯೋ ಯೂಟ್ಯೂಬ್ನಿಂದ ತೆಗೆಯಲ್ಪಡುತ್ತಿದ್ದಂತೆ ಟ್ವೀಟ್ ಮಾಡಿದ ರಜಿನಿಕಾಂತ್, ದೇವರನ್ನು ಅವಹೇಳನ ಮಾಡಿದವರ ವಿರುದ್ಧ ತಕ್ಷಣವೇ ಕ್ರಮ ಜರುಗಿಸಿದ ತಮಿಳುನಾಡು ಸರ್ಕಾರದ ನಡೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ ಎಂದಿದ್ದಾರೆ. ಅಲ್ಲದೆ ಈಗಲಾದರೂ ದೇವರ ಕುರಿತ ಅವಹೇಳನ ಕೊನೆಯಾಗಲಿ ಎಂದು ತಮಿಳಿನಲ್ಲಿ ಟ್ವೀಟ್ ಮಾಡಿದ್ದರು.
ಬಳಿಕ ಇದೇ ಹ್ಯಾಷ್ಟ್ಯಾಗ್ ಬಳಸಿ ಅವರ ಅಭಿಮಾನಿಗಳು ಹಾಗೂ ಹಿಂಬಾಲಕರು ಟ್ವೀಟ್ ಮಾಡಿದ್ದರು. ಇದಕ್ಕೂ ಮೊದಲು ‘ಕರುಪ್ಪರ್ ಕೂಟಮ್’ ಎಂಬ ಯೂಟ್ಯೂಬ್ ಚಾನೆಲ್ನಲ್ಲಿ ‘ಕಂದಾ ಶಷ್ಟಿ ಕವಚಮ್’ ಎಂಬ ಸ್ತೋತ್ರಗಳನ್ನು ಅಶ್ಲೀಲವಾಗಿ ವ್ಯಾಖ್ಯಾನಿಸಿ ವಿಡಿಯೋ ಹರಿಬಿಡಲಾಗಿತ್ತು. ಇದರಿಂದ ಬಲಪಥೀಯ ಸಂಘಟನೆಗಳು ಕೆರಳಿದ್ದಲ್ಲದೆ, ಪೊಲೀಸರಿಗೆ ದೂರು ನೀಡಿದ್ದವು.
ಬಳಿಕ ಈ ಘಟನೆ ಸಂಬಂಧ ಆ್ಯಂಕರ್ ಸೇರಿದಂತೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಡಿಯೋ ಸಹ ಕಮ್ಯುನಿಟಿ ಗೈಡ್ಲೈನ್ಸ್ ಪ್ರಕಾರ ಯೂಟ್ಯೂಬ್ನಿಂದ ಅಳಿಸಲಾಗಿತ್ತು.