ಚಂಡೀಗಢ(ಪಂಜಾಬ್): ರಾಜ್ಯದ ಯುವಕರಿಗೆ ಸ್ಮಾರ್ಟ್ ಫೋನ್‌ಗಳನ್ನು ವಿತರಿಸುವ ಯೋಜನೆಗೆ ಪಂಜಾಬ್ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ವರ್ಷದ ಡಿಸೆಂಬರ್‌ನಿಂದ ಯೋಜನೆಯ ಅನುಷ್ಠಾನಕ್ಕೆ ಸರ್ಕಾರ ಮುಂದಾಗಿದೆ.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಪಂಜಾಬ್ನಲ್ಲಿ ಚುನಾವಣೆ ವೇಳೆ ನೀಡಿದ್ದ ಭರವಸೆಗೆ ಅನುಗುಣವಾಗಿ 2017-18ರ ಹಣಕಾಸು ವರ್ಷದ ಬಜೆಟ್‌ನಲ್ಲಿ 'ರಾಜ್ಯದ ಯುವಕರಿಗೆ ಮೊಬೈಲ್ ಫೋನ್ ವಿತರಣೆ' ಯೋಜನೆಯನ್ನು ಘೋಷಿಸಿತ್ತು. ಆದರೆ 2018-19ರ ಬಜೆಟ್‌ನಲ್ಲಿ ಈ ಯೋಜನೆಗೆ ಸರಿಯಾದ ಹಣವನ್ನು ಹಂಚಿಕೆ ಮಾಡಲಾಗಿದೆ.
ಯೋಜನೆಯ ಪ್ರಕಾರ, ಮೊದಲ ಹಂತದಲ್ಲಿ ರಾಜ್ಯದಲ್ಲಿ 11 ಮತ್ತು 12 ನೇ ತರಗತಿಯಲ್ಲಿ ಓದುತ್ತಿರುವ ಮೊಬೈಲ್ ಇಲ್ಲದ ಬಡ ವಿದ್ಯಾರ್ಥಿನಿಯರಿಗೆ ಉಚಿತ ಸ್ಮಾರ್ಟ್ ಫೋನ್ ವಿತರಿಸಲು ಸರ್ಕಾರ ನಿರ್ಧರಿಸಿದೆ. ಡಿಸೆಂಬರ್ ತಿಂಗಳಿನಲ್ಲಿ ಯೋಜನೆಯ ಮೊದಲ ಹಂತ ಅನುಷ್ಠಾನಗೊಳ್ಳಲಿದೆ.
ರಾಜ್ಯದ ಯುವಕರಿಗೆ ಡಿಜಿಟಲ್ ಶಿಕ್ಷಣ, ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ, ಸರ್ಕಾರಿ ಅರ್ಜಿಗಳ ಮೂಲಕ ನಾಗರಿಕ ಸೇವೆಗಳ ಪ್ರವೇಶ ಇತ್ಯಾದಿಗಳ ಮಾಹಿತಿ ನೀಡುವ ಉದ್ದೇಶ ಈ ಯೋಜನೆಯದ್ದಾಗಿದೆ. ಈ ಮೂಲಕ ಡಿಜಿಟಲ್ ಸಬಲೀಕರಣವು ಸಾಧ್ಯವಾಗುತ್ತದೆ ಎಂದು ರಾಜ್ಯ ಸರ್ಕಾರದ ವಕ್ತಾರ ಮಾಹಿತಿ ನೀಡಿದ್ದಾರೆ.