ಪಶ್ಚಿಮ ಗೋದಾವರಿ (ಆಂಧ್ರಪ್ರದೇಶ): ಏಲೂರು ನಿಗೂಢ ಕಾಯಿಲೆಯ ರಹಸ್ಯವನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಮತ್ತು ಇತರ ವೈದ್ಯಕೀಯ ಸಂಸ್ಥೆಗಳು ಬಯಲು ಮಾಡಿದೆ. ದೇಹದಲ್ಲಿ ಕೀಟನಾಶಕಗಳು ಉಳಿದುಕೊಂಡಿದ್ದೇ ಕಾಯಿಲೆ ಹರಡಲು ಕಾರಣವಾಗಿದೆ ಎಂದು ತಿಳಿದು ಬಂದಿದೆ.
ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಡಿಸೆಂಬರ್ 5 ರಿಂದ ಕಾಣಿಸಿಕೊಂಡ ನಿಗೂಢ ಕಾಯಿಲೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಏಕಾಏಕಿ ಏಲೂರು ಪಟ್ಟಣದ ಜನರು ಮೂರ್ಛೆ ತಪ್ಪಿ, ಬಾಯಲ್ಲಿ ನೊರೆ ಬಂದು ಅಸ್ವಸ್ಥರಾಗುತ್ತಿದ್ದರು. ಈವರೆಗೆ ಮೂವರು ಮೃತಪಟ್ಟಿದ್ದು, 600ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ: ಏಲೂರು ದುರಂತ: ವಿಚಿತ್ರ ಕಾಯಿಲೆಗೆ ಮತ್ತಿಬ್ಬರು ಬಲಿ, ಅಸ್ವಸ್ಥರ ಸಂಖ್ಯೆ 585ಕ್ಕೆ ಏರಿಕೆ
ಕಾಯಿಲೆ ಕಾರಣ ಪತ್ತೆ ಮಾಡುವ ಜವಾಬ್ದಾರಿಯನ್ನು ಏಮ್ಸ್ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಕೆಮಿಕಲ್ ಟೆಕ್ನಾಲಜಿ (ಐಐಸಿಟಿ)ಗೆ ಆಂಧ್ರ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ವಹಿಸಿದ್ದರು. ದೆಹಲಿಯ ಏಮ್ಸ್ ಸೇರಿದಂತೆ ವಿವಿಧ ಆರೋಗ್ಯ ಸಂಸ್ಥೆಗಳು ನೀರು, ಆಹಾರ ಹಾಗೂ ರಕ್ತದ ಮಾದರಿಗಳನ್ನು ಪರೀಕ್ಷಿಸಿದ್ದವು. ಇದೀಗ ಮನುಷ್ಯರ ದೇಹದಲ್ಲಿ ಕೀಟನಾಶಕ ಸೇರಿದ್ದರಿಂದಲೇ ಅವಘಡ ನಡೆದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಕೀಟನಾಶಕಗಳು ಮಾನವ ದೇಹವನ್ನು ಹೇಗೆ ಪ್ರವೇಶಿಸಿದವು ಎಂಬುದನ್ನು ಅರ್ಥಮಾಡಿಕೊಳ್ಳಲು ದೀರ್ಘಾವಧಿಯ ಆಳವಾದ ಅಧ್ಯಯನದ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.