ಮುಂಬೈ: ದೇಶದಲ್ಲಿ ಉದ್ಯೋಗ ನಷ್ಟದಂತಹ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ, ಜನರು ಪ್ರಧಾನಿ ನರೇಂದ್ರ ಮೋದಿ ರಾಜೀನಾಮೆಗಾಗಿ ಆಗ್ರಹಿಸಬಹುದು ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ, 10 ಕೋಟಿ ಜನರು ತಮ್ಮ ಜೀವನೋಪಾಯವನ್ನೇ ಕಳೆದುಕೊಂಡಿದ್ದಾರೆ. ಈ ಬಿಕ್ಕಟ್ಟು 40 ಕೋಟಿ ಕುಟುಂಬಗಳ ಬದುಕಿಗೆ ಕೊಳ್ಳಿ ಇಟ್ಟಿದೆ ಎಂದು ರಾವತ್, ಶಿವಸೇನೆಯ ಮುಖವಾಣಿ 'ಸಾಮ್ನಾ'ದ ತಮ್ಮ ಸಾಪ್ತಾಹಿಕ ಅಂಕಣ' ರೋಕ್‌ಥಾಕ್ 'ನಲ್ಲಿ ಬರೆದಿದ್ದಾರೆ.
ಒಂದೆಡೆ ಉದ್ಯೋಗಸ್ಥ ಮಧ್ಯಮ ವರ್ಗದ ಜನರು ತಮ್ಮ ಉದ್ಯೋಗ ಕಳೆದುಕೊಂಡಿದ್ದರೆ, ವ್ಯಾಪಾರ ಹಾಗೂ ಉದ್ಯಮವು ಸುಮಾರು ನಾಲ್ಕು ಲಕ್ಷ ಕೋಟಿ ರೂ. ನಷ್ಟ ಅನುಭವಿಸಿದೆ ಎಂದು ರಾಜ್ಯಸಭಾ ಸದಸ್ಯ ರಾವತ್ ತಿಳಿಸಿದ್ದಾರೆ.
ಜನರ ತಾಳ್ಮೆಗೂ ಒಂದು ಮಿತಿ ಇದೆ. ಸರ್ಕಾರ ಕೇವಲ ಭರವಸೆ ಮತ್ತು ಆಶ್ವಾಸನೆಗಳ ಮೇಲೆಯೇ ಬದುಕುಳಿಯಲು ಸಾಧ್ಯವಿಲ್ಲ. ಶ್ರೀರಾಮನ ವನವಾಸ ಕೊನೆಗೊಂಡಿದ್ದರೂ, ಪ್ರಸ್ತುತ ಪರಿಸ್ಥಿತಿ ಕಷ್ಟಕರವಾಗಿದೆ ಎಂದು ಪ್ರಧಾನ ಮಂತ್ರಿ ಸಹ ಒಪ್ಪುತ್ತಾರೆ. ಈ ನಡುವೆ ತಮ್ಮ ಜೀವನ ಇಷ್ಟೊಂದು ಅಸುರಕ್ಷಿತ ಎಂದು ಜನ ಇಲ್ಲಿಯವರೆಗೂ ಅಂದುಕೊಂಡಿರಲಿಲ್ಲ ಎಂದು ರಾವತ್ ಆಕ್ರೋಶ ಹೊರಹಾಕಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ವಿರುದ್ಧ ಅಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕೊರೊನಾ ಪರಿಸ್ಥಿತಿ ಮತ್ತು ಆರ್ಥಿಕ ಬಿಕ್ಕಟ್ಟನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ವಿಫಲವಾದ ಕಾರಣ ಅವರ ರಾಜೀನಾಮೆಗೆ ಒತ್ತಾಯಗಳಿವೆ. ಭಾರತವೂ ಸಹ ಇಂತಹ ಸನ್ನಿವೇಶಕ್ಕೆ ಸಾಕ್ಷಿಯಾಗಬಹುದು ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.