ಹೈದರಾಬಾದ್: ಸಮಸ್ಯೆ ಇರುವುದು ನಿರುದ್ಯೋಗದಲ್ಲಿ, ಅದನ್ನು ಬಗೆಹರಿಸಲಾಗದ ನಿಮಗೆ ದೇಶದಲ್ಲಿ ದಂಪತಿಗೆ ಎರಡು ಮಕ್ಕಳ ನೀತಿ ಕಡ್ಡಾಯದ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ರ ಹೇಳಿಕೆ ವಿರುದ್ಧ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಕಿಡಿಕಾರಿದ್ದಾರೆ.
ತೆಲಂಗಾಣದ ನಗರಸಭೆ ಚುನಾವಣೆ ಕುರಿತು ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಹೈದರಾಬಾದ್ ಸಂಸದ ಒವೈಸಿ, ಕಳೆದ ಐದೂವರೆ ವರ್ಷಗಳಲ್ಲಿ ಉದ್ಯೋಗ ಸಮಸ್ಯೆಯನ್ನು ಪರಿಹರಿಸುವಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ವಿಫಲವಾಗಿದೆ. ದೇಶದಲ್ಲಿ ಶೇ.60 ರಷ್ಟು ಜನರು 40 ವರ್ಷಕ್ಕಿಂತ ಒಳಪಟ್ಟವರಿದ್ದಾರೆ. ಯುವಕರಿಗೆ ಉದ್ಯೋಗವನ್ನು ದೊರಕಿಸಿಕೊಡುವಲ್ಲಿ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಸಾಧ್ಯವಾಗಿಲ್ಲ. 2018 ರಲ್ಲಿ ಪ್ರತಿದಿನಕ್ಕೆ 36 ಯುವಕರು ನಿರುದ್ಯೋಗ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 36 ಮಕ್ಕಳನ್ನು ಬದುಕಿಸುವಲ್ಲಿ ವಿಫಲರಾದ ನಿಮಗೆ ಈಗ ಎರಡು ಮಕ್ಕಳ ನೀತಿ ಕುರಿತು ಮಾತನಾಡಲು ನಾಚಿಕೆಯಾಗುವುದಿಲ್ಲವೇ? ಎಂದು ಮೋಹನ್ ಭಾಗವತ್ ವಿರುದ್ಧ ಗುಡುಗಿದ್ದಾರೆ.
ಮೋದಿಯವರು ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಕೊಡಿಸುವ ಭರವಸೆ ನೀಡಿದ್ದರು. ನಾನು ಈ ಕುರಿತು ಮಾತನಾಡಿದರೆ ಒವೈಸಿ ಪ್ರಚೋದನಾಕಾರಿ ಭಾಷಣ ಮಾಡುತ್ತಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ನೀವು ಸರ್ಕಾರವನ್ನು ನಡೆಸುತ್ತಿರಬಹುದು, ನನ್ನನ್ನಲ್ಲ. ಹೀಗಾಗಿ ನಾನು ಪ್ರಶ್ನಿಸುತ್ತಲೇ ಇರುತ್ತೇನೆ, ನೀವು ಅದಕ್ಕೆ ಉತ್ತರಿಸಬೇಕು. ಮುಸ್ಲೀಮರ ಜನಸಂಖ್ಯೆಯನ್ನು ನಿಯಂತ್ರಿಸಬೇಕೆಂದು ಆರ್ಎಸ್ಎಸ್ನವರು ಹೇಳುತ್ತಾರೆ. ನನ್ನನ್ನೂ ಸೇರಿದಂತೆ ಅನೇಕ ಬಿಜೆಪಿ ನಾಯಕರಿಗೆ ಎರಡಕ್ಕಿಂತ ಹೆಚ್ಚು ಮಕ್ಕಳಿವೆ. ನಾನು ನಿರುದ್ಯೋಗದ ಕುರಿತು ಪ್ರಶ್ನಿಸಿದರೆ, ಅವರು ಎರಡು ಮಕ್ಕಳ ನೀತಿ ಕುರಿತು ಮಾತನಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಜನಸಂಖ್ಯಾ ಬೆಳವಣಿಗೆ ದೇಶದ ಅಭಿವೃದ್ಧಿಗೆ ಪೂರಕವಲ್ಲ. ಹೀಗಾಗಿ ಎರಡು ಮಕ್ಕಳು ಮಾತ್ರ ಎಂಬ ನಿಯಮ ದೇಶಾದ್ಯಂತ ಜಾರಿಗೊಳಿಸುವ ಅವಶ್ಯಕತೆ ಇದೆ. ಆದರೆ ಇದರ ನಿರ್ಧಾರ ಕೇಂದ್ರಕ್ಕೆ ಬಿಟ್ಟಿದ್ದು ಎಂದು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.