ನವದೆಹಲಿ: 2020ರ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯನ್ನು ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ ಕೇಂದ್ರ ಸಾರ್ವಜನಿಕ ಸೇವಾ ಆಯೋಗವು 20202ರ ಯುಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಇನ್ನಷ್ಟು ವಿಳಂಬಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.
ಅಕ್ಟೋಬರ್ 4ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಈಗಾಗಲೇ ಮೇ 31ಕ್ಕೆ ಮುಂದೂಡಲಾಗಿದೆ. ಈ ವರ್ಷ ಪರೀಕ್ಷೆಗಳು ವಿಳಂಬವಾದರೆ 2021 ಜೂನ್ 27ರಂದು ನಿಗದಿಯಾಗಿರುವ ಪೂರ್ವಭಾವಿಗಳನ್ನು ಕೂಡಾ ಮುಂದೂಡಬೇಕಾಗುತ್ತದೆ ಎಂದು ಆಯೋಗ ವಾದಿಸಿದೆ.
ನಾಗರಿಕ ಸೇವೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ವಯಸ್ಕರು, ಎಲ್ಲರೂ ಪದವೀಧರರು ಅಥವಾ ಅದಕ್ಕಿಂತಲೂ ಅಧಿಕ ವಿದ್ಯಾರ್ಹತೆ ಹೊಂದಿರುವವರು. ಹೀಗಾಗಿ ಅವರು ಜವಾಬ್ದಾರಿಯುತವಾಗಿ ವರ್ತಿಸುತ್ತಾರೆ ಎಂಬ ನಿರೀಕ್ಷೆಯಿದೆ. ಪರೀಕ್ಷೆಗಳನ್ನು ವಿಳಂಬ ಮಾಡದಂತೆ ಯುಪಿಎಸ್‌ಸಿಗೆ ವಿದ್ಯಾರ್ಥಿಗಳಿಂದ ಇಮೇಲ್‌ಗಳನ್ನು ಸಹ ಕಳುಹಿಸಿದ್ದಾರೆ ಎಂದು ಆಯೋಗ ತಿಳಿಸಿದೆ.
ಕೋವಿಡ್-19 ದೃಷ್ಟಿಯಿಂದ ಜೆಇಇ, ನೀಟ್ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮುಂದೂಡಬೇಕೆಂದು ಈ ಹಿಂದೆ ಹಲವಾರು ಮನವಿಗಳನ್ನು ಉನ್ನತ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಆದರೂ ಎಲ್ಲಾ ಮನವಿಯನ್ನು ನ್ಯಾಯಾಲಯವು ನಿರಾಕರಿಸಿತ್ತು.