ಹೈದರಾಬಾದ್: ಲಾಕ್ಡೌನ್ ಹಿನ್ನೆಲೆಯಲ್ಲಿ ಯಾವುದೇ ವಾಹನ ಸಿಗದ ಕಾರಣ HIV ರೋಗಿಯ ಮೃತದೇಹವನ್ನು ಸೈಕಲ್ ಮೂಲಕವೇ ಸರ್ಕಾರಿ ಆಸ್ಪತ್ರೆಗೆ ಸಾಗಿಸಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.
ಪೊಲೀಸರ ಪ್ರಕಾರ, ಕಳೆದ ಕೆಲವು ವರ್ಷಗಳಿಂದ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದ ವ್ಯಕ್ತಿ ಶನಿವಾರ ರಾತ್ರಿ ನಿರಾಶ್ರಿತರ ಕೇಂದ್ರದಲ್ಲಿ ಸಾವಿಗೀಡಾಗಿದ್ದಾನೆ. ದೇಹದಿಂದ ದುರ್ವಾಸನೆ ಬರುತ್ತಿದ್ದಂತೆ ಪೊಲೀಸರನ್ನು ಎಚ್ಚರಿಸಲಾಗಿದೆ. ಆದರೆ ಕೊರೊನಾ ವೈರಸ್ ಭಯದಿಂದಾಗಿ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಸ್ಥಳಾಂತರಿಸಲು ಯಾರೂ ಕೂಡ ಸಹಾಯಕ್ಕೆ ಮುಂದಾಗಿಲ್ಲ. ಹೀಗಾಗಿ ಶವವನ್ನು ಸಾಗಿಸಲು ಪೊಲೀಸರು ಕೆಲ ಕಾರ್ಮಿಕರನ್ನು ವಿನಂತಿಸಿದ್ದಾರೆ.
ಮೃತದೇಹ ಸಾಗಿಸಲು ಯಾವುದೇ ಆ್ಯಂಬುಲೆನ್ಸ್ ಲಭ್ಯವಿಲ್ಲದ ಕಾರಣ, ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಆಸ್ಪತ್ರೆಗೆ ಸೈಕಲ್ ಮೂಲಕವೇ ಸಾಗಿಸಿದ್ದಾರೆ. ಮೃತ ವ್ಯಕ್ತಿಯ ಬಳಿಯಿದ್ದ ಫೋನ್ ನಂಬರ್ ಆಧರಿಸಿ ಆತನ ಕುಂಬಸ್ಥರನ್ನು ಸಂಪರ್ಕಿಸಿದ ಪೊಲೀಸರು ಮಾಹಿತಿ ನೀಡಿದ್ದಾರೆ.