ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ನಾಳೆ ಭಾರತದ ಪುರಾತತ್ವ ಸರ್ವೇಕ್ಷಣಾ(Archaeological Survey of India) ಇಆಲಾಖೆಯ ಸಂರಕ್ಷಿತ ಸ್ಮಾರಕಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರವೇಶ ನೀಡಲಾಗುತ್ತದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಪ್ರಕಟಿಸಿದೆ.
ಮಾರ್ಚ್ 8 ರಂದು (ಭಾನುವಾರ) ಎಲ್ಲಾ ಕೇಂದ್ರೀಯ ಸಂರಕ್ಷಿತ ಸ್ಮಾರಕಗಳಿಗೆ ಭೇಟಿ ನೀಡುವ ಮಹಿಳಾ ಸಂದರ್ಶಕರಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸುತ್ತೋಲೆ ಹೊರಡಿಸಿದೆ.
'ಮಹಿಳಾ ದಿನವನ್ನು ಪ್ರತಿ ವರ್ಷ ಮಾರ್ಚ್ 8ರಂದು ಆಚರಿಸಲಾಗುತ್ತದೆಯಾದರೂ 'ದೇವಿ' (ದೇವತೆ) ಯಂತಹ ಮಹಿಳೆಯರನ್ನು ಗೌರವಿಸುವುದು ಭಾರತದಲ್ಲಿ ಯಾವಾಗಲೂ ಒಂದು ಸಂಪ್ರದಾಯವಾಗಿದೆ ಎಂದು ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
'ಮಹಿಳಾ ದಿನದಂದು ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಂರಕ್ಷಿತ ಸ್ಮಾರಕಗಳಿಗೆ ಉಚಿತ ಪ್ರವೇಶವನ್ನು ನೀಡುವ ಮೂಲಕ 'ದೇವಿ'ಯರಿಗೆ ನಮ್ಮ ಗೌರವವನ್ನು ಸೂಚಿಸುತ್ತೇವೆ. ಎಂದು ಪಟೇಲ್ ಹೇಳಿದ್ದಾರೆ.
ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ತಾಜ್ ಮಹಲ್, ಕೊನಾರ್ಕ್ನಲ್ಲಿನ ಸೂರ್ಯ ದೇವಾಲಯ, ಮಾಮಲ್ಲಾಪುರಂ, ಎಲ್ಲೋರಾ ಗುಹೆಗಳು, ಖಜುರಾಹೊ ಸ್ಮಾರಕಗಳು ಮತ್ತು ಅಜಂತಾ ಗುಹೆಗಳಂತಹ ಸ್ಮಾರಕಗಳಿಗೆ ನಾಳೆ ಮಹಿಳೆಯರಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.