ಮಾಸ್ಕೋ (ರಷ್ಯಾ): ಎರಡನೇ ಮಹಾಯುದ್ಧದಲ್ಲಿ ಜರ್ಮನಿಯ ನಾಜಿಗಳ ವಿರುದ್ಧ ಗೆಲುವು ಸಾಧಿಸಿ 75 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಅದ್ಧೂರಿಯಾಗಿ ಮಾಸ್ಕೋ ವಿಕ್ಟರಿ ಡೇ ಆಚರಿಸಲು ರಷ್ಯಾ ಭರಪೂರ ಸಿದ್ಧತೆ ನಡೆಸಿದೆ.
ಸಂಪ್ರದಾಯದಂತೆ ಈ ವರ್ಷದ ಮೇ 9ರಂದು ಸಮಾರಂಭ ನಡೆಯಬೇಕಿದ್ದು, ಕೊರೊನಾ ವೈರಸ್ ಹಾವಳಿ ಕಾರಣಕ್ಕೆ ರದ್ದಾಗಿತ್ತು. ಈಗ ಇದೇ ತಿಂಗಳ ಕೊನೆಯ ವಾರಕ್ಕೆ ಅಂದ್ರೆ ಜೂನ್ 24ಕ್ಕೆ ಸಮಾರಂಭ ನಡೆಸಲು ಸಿದ್ಧತೆ ನಡೆಸಲಾಗಿದೆ.
ಇದೇ ಕಾರಣಕ್ಕಾಗಿ ಶನಿವಾರ ರಾತ್ರಿ ರಷ್ಯಾದ ರಾಜಧಾನಿ ಮಾಸ್ಕೋದ ರೆಡ್ ಸ್ಕ್ವೇರ್ನಲ್ಲಿ ಟ್ಯಾಂಕರ್ಗಳು, ಶಸ್ತ್ರ ಸಜ್ಜಿತ ಸೇನೆ, ಮಿಸೈಲ್ಗಳನ್ನು ತಂದು ಪೂರ್ವಾಭ್ಯಾಸ ನಡೆಸಲಾಗಿದೆ. ಸೈನಿಕರು ಮಾಸ್ಕೋದ ಕೇಂದ್ರ ಭಾಗದಿಂದ ರಸ್ತೆಗಳಲ್ಲಿ ಪರೇಡ್ ನಡೆಸಿದ್ದಾರೆ.
ನಾಜಿಗಳ ವಿರುದ್ಧ ಗೆದ್ದ ದಿನವನ್ನು ರಷ್ಯಾದಲ್ಲಿ ರಜಾದಿನವನ್ನಾಗಿ ಘೋಷಣೆ ಮಾಡಲಾಗಿದೆ. ಪ್ರತಿವರ್ಷ ನಡೆಯುವ ಈ ಸಮಾರಂಭ ವಿಶ್ವಾದ್ಯಂತ ಕೋಟ್ಯಂತರ ಮಂದಿಯನ್ನು ಆಕರ್ಷಿಸುತ್ತದೆ.
ಸದ್ಯಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಸಮಾರಂಭಕ್ಕೆ ಅವಕಾಶ ಮಾಡಿಕೊಡಲಾಗಿದೆ. ರಷ್ಯಾದಲ್ಲಿ ಈವರೆಗೆ 5,28,964 ಸೋಂಕಿತರಿದ್ದು, ಮೂರನೇ ಅತಿ ಹೆಚ್ಚು ಸೋಂಕಿತರಿರುವ ದೇಶ ಇದಾಗಿದೆ.