ಕೋಲ್ಕತಾ (ಪಶ್ಚಿಮ ಬಂಗಾಳ): ಹೌರಾ ಜಿಲ್ಲೆಯ 23 ವರ್ಷದ ಗಗನಸಖಿ ತನ್ನ ನೆರೆಹೊರೆಯವರಿಂದ ನಿಂದನೆ, ಬೆದರಿಕೆ ಮತ್ತು ದೈಹಿಕ ಹಲ್ಲೆಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದಾರೆ.
ಎರಡು ವರ್ಷಗಳಿಂದ ಖಾಸಗಿ ವಿಮಾನಯಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಸುದೀಪಾ ಅಧಿಕಾರಿ, ದೇಶೀಯ ವಿಮಾನ ಪ್ರಯಾಣ ಪುನರಾರಂಭವಾದ ಹಿನ್ನೆಲೆ ತನ್ನ ಕರ್ತವ್ಯವನ್ನು ಮತ್ತೆ ಆರಂಭಿಸಿದ್ದಾರೆ. ಆದರೆ ನೆರೆಹೊರೆಯವರು ಆಕೆಯನ್ನು 'ಕೊರೊನಾ ಕ್ಯಾರಿಯರ್' ಎಂದು ಹೇಳಿ ನಿಂದಿಸಿ, ಬೆದರಿಕೆಯೊಡ್ಡಿ, ದೈಹಿಕ ಹಲ್ಲೆ ನಡೆಸಿದ್ದಾರೆ.
"ನೆರೆಹೊರೆಯವರು ನನ್ನನ್ನು ಕೀಳಾಗಿ ನೋಡುತ್ತಾರೆ ಮತ್ತು 'ಕೊರೊನಾ ಕ್ಯಾರಿಯರ್' ಎಂದು ಕರೆಯುವ ಮೂಲಕ ನನಗೆ ಕಿರುಕುಳ ನೀಡುತ್ತಾರೆ. ನಮ್ಮ ಪ್ರದೇಶವನ್ನು ಪ್ರವೇಶಿಸಲು ಅವರು ನನಗೆ ಅನುಮತಿ ನೀಡುತ್ತಿಲ್ಲ ಮತ್ತು ನನ್ನ ಹೆತ್ತವರು ಅವರ ಬೆದರಿಕೆಯಿಂದಾಗಿ ಹೊರ ಹೋಗಲು ಸಾಧ್ಯವಾಗುತ್ತಿಲ್ಲ. ಹತ್ತಿರದ ಅಂಗಡಿಗಳು ನಮಗೆ ಏನನ್ನೂ ಮಾರಾಟ ಮಾಡುತ್ತಿಲ್ಲ. ಕೆಲವು ದಿನಗಳ ಹಿಂದೆ ನಾನು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ನನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿ, ಈ ಪ್ರದೇಶದಿಂದ ಹೊರ ಹೋಗುವಂತೆ ಬೆದರಿಕೆ ಹಾಕಿದ್ದಾರೆ" ಎಂದು ಸುದೀಪಾ ಅಧಿಕಾರಿ ಹೇಳಿದರು.
"ನಾನು ಕೆಲಸ ಮಾಡುವ ವಿಮಾನಯಾನ ಸಂಸ್ಥೆ ಹಲವಾರು ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿದೆ. ಕಟ್ಟುನಿಟ್ಟಾಗಿ ಕೋವಿಡ್-19 ಮಾರ್ಗಸೂಚಿಗಳನ್ನು ಅನುಸರಿಸುತ್ತಿದೆ. ಈ ಕುರಿತು ನಾನು ನೆರೆಹೊರೆಯವರಿಗೆ ಹೇಳಿದರೂ ಅವರು ನನಗೆ ಬೆದರಿಕೆ ಹಾಕುತ್ತಿದ್ದಾರೆ" ಎಂದು ಗಗನಸಖಿ ದೂರಿದ್ದಾರೆ.
ಹೌರಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.