ಗುವಾಹಟಿ(ಅಸ್ಸೋಂ): ಬಾರ್ಪೆಟಾ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.
ಎನ್‌ಡಿಆರ್‌ಎಫ್ ತಂಡ ಈಗಾಗಲೇ ಸಂಕಷ್ಟದಲ್ಲಿದ್ದ 487 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ. ಅಲ್ಲದೆ, ಜಿಲ್ಲಾಡಳಿತದ ಜೊತೆಗೂಡಿ ಜನರಿಗೆ ಮಾಸ್ಕ್ ವಿತರಿಸಿದೆ ಮತ್ತು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಸಹಕರಿಸುತ್ತಿದೆ. ಮಳೆಗಾಲ ಆರಂಭದಲ್ಲಿ ಸಂಕಷ್ಟದಲ್ಲಿದ್ದ ಸುಮಾರು 950 ಗ್ರಾಮಸ್ಥರನ್ನು ಗುಹಾಹಟಿ ಎನ್‌ಡಿಆರ್‌ಎಫ್ ತಂಡದ ಮೊದಲ ಬೆಟಾಲಿಯನ್ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಿದೆ.
ಸದ್ಯ, ಪ್ರವಾಹ ಪೀಡಿತ ಜಿಲ್ಲೆಗಳಾದ ಜೋರ್ಹತ್, ಬೊಂಗೈಗಾಂವ್, ಕಮ್ರೂಪ್ ಮೆಟ್ರೋ, ಕಮ್ರಪ್ ಗ್ರಾಮೀಣ, ಬಕ್ಸಾ, ಬಾರ್ಪೆಟಾ, ಕ್ಯಾಚರ್, ಶಿವಸಾಗರ್, ಸೋನಿತ್‌ಪುರ, ಧೆಮಾಜಿ ಮತ್ತು ಟಿನ್ಸುಕಿಯಾದಲ್ಲಿ ಎನ್ಡಿಆರ್ಎಫ್ನ 11 ಶೋಧ ಮತ್ತು ರಕ್ಷಣಾ ತಂಡಗಳು ಕಾರ್ಯಚರಣೆಯಲ್ಲಿ ತೊಡಗಿವೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರೀ ಮಳೆಗೆ ಬೊಂಗೈಗಾಂವ್, ಬಕ್ಸಾ, ಕಮ್ರೂಪ್ ಗ್ರಾಮೀಣ (ರಂಗಿಯಾ) ಮತ್ತು ಬಾರ್ಪೆಟಾ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಪ್ರಮುಖ ನದಿಗಳಾದ ಪುತಿಮರಿ, ಬೆಕಿ, ಐ ಮತ್ತು ಪಹುಮಾರ ತುಂಬಿ ಹರಿಯುತ್ತಿವೆ.
ರಾಜ್ಯದ 33 ಜಿಲ್ಲೆಗಳ ಪೈಕಿ 24 ಜಿಲ್ಲೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಧೆಮಾಜಿ, ಉದಲ್ಗುರಿ, ಬಿಸ್ವಾನಾಥ್, ಲಖಿಂಪುರ್, ಚಿರಾಂಗ್, ಬಾರ್ಪೆಟಾ, ಬೊಂಗೈಗಾಂವ್, ಕೊಕ್ರಜಾರ್, ಗೋಲ್ಪಾರ, ನಾಗಾವ್ನ್, ಗೋಲಾಘಾಟ್, ಜೋರ್ಹತ್, ಮಜುಲಾಂಗ್, ದಿಬ್ರುಗರ್ ಟಿನ್ಸುಕಿಯಾ ಸೇರಿದಂತೆ ಒಟ್ಟು 16 ಜಿಲ್ಲೆಗಳಲ್ಲಿ ಹೆಚ್ಚಿನ ಹಾನಿ ಸಂಭವಿಸಿದೆ. ಒಟ್ಟು 18 ಜಿಲ್ಲೆಗಳಲ್ಲಿ ರಸ್ತೆ, ಸೇತುವೆ ಸೇರಿದಂತೆ ಮೂಲ ಸೌಕರ್ಯಗಳು ಹಾನಿಗೊಳಗಾಗಿವೆ. ರಾಜ್ಯಾದ್ಯಂತ 810 ಮನೆಗಳಿಗೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾಗಿವೆ ಎಂದು ಎಎಸ್‌ಡಿಎಂಎ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ಪ್ರವಾಹ ಪರಿಸ್ಥಿತಿಯಿಂದ ಕನಿಷ್ಠ 8.03 ಲಕ್ಷ ಸಾಕು ಪ್ರಾಣಿಗಳು ಮತ್ತು 4.24 ಲಕ್ಷ ಕೋಳಿಗಳಿಗೆ ತೊಂದರೆಯಾಗಿವೆ.
ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಅಸ್ಸೋಂ ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ, ಸ್ಥಳೀಯಾಡಳಿತದೊಂದಿಗೆ ಸೇರಿ ಸಂಕಷ್ಟದಲ್ಲಿರುವ ಜನರ ರಕ್ಷಣೆಯಲ್ಲಿ ತೊಡಗಿದೆ ಮತ್ತು ಅವರಿಗೆ ಅಗತ್ಯ ಸಾಮಗ್ರಿಗಳನ್ನು ಒದಗಿಸುತ್ತಿದೆ. ಈ ಮಧ್ಯೆ ಹಲವು ಈಶಾನ್ಯ ರಾಜ್ಯಗಳಲ್ಲಿ ನಿರಂತರ ಮಳೆಯಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಪ್ರವಾಹದ ಭೀತಿ ಎದುರಾಗಿದೆ. ಈ ಪ್ರದೇಶಗಳಲ್ಲಿ ಮುಂದಿನ ಒಂದೆರಡು ದಿನಗಳಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.