ಮುಂಬೈ: ಕೊರೊನಾ ಸೋಂಕಿನಿಂದ ಬಳಲುತ್ತಿರುವವರಿಗೆ ದೇಶದ ವಿವಿಧ ಆಸ್ಪತ್ರೆಗಳಲ್ಲಿ ವೈದ್ಯರು ಹಗಲು-ರಾತ್ರಿ ಎನ್ನದೆ ಚಿಕಿತ್ಸೆ ನೀಡುತ್ತಿದ್ದು, ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರರಾಗುತ್ತಿದ್ದಾರೆ. ಆದರೆ ಇದರ ಮಧ್ಯೆ ವೈದ್ಯರೊಬ್ಬರು ಮಾಡಿರುವ ಕೃತ್ಯದಿಂದ ಎಲ್ಲರೂ ತಲೆತಗ್ಗಿಸುವಂತಾಗಿದೆ.
34 ವರ್ಷದ ವೈದ್ಯನೊಬ್ಬ 44 ವರ್ಷದ ಸೋಂಕಿತ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದು, ಆತನ ವಿರುದ್ಧ ಈಗಾಗಲೇ ದೂರು ದಾಖಲಾಗಿದೆ. ಮುಂಬೈನ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾಗ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.
ಪ್ರಕರಣ ದಾಖಲು ಮಾಡಿಕೊಂಡಿರುವುದಾಗಿ ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ. ಕೊರೊನಾ ಪಾಸಿಟಿವ್ ಸೋಂಕಿತೆ ಜೊತೆ ವೈದ್ಯ ಸಂಪರ್ಕ ಹೊಂದಿದ್ದ ಕಾರಣ ಆತನ ಬಂಧನ ಮಾಡಿಲ್ಲ ಎಂದು ವೈದ್ಯರು ತಿಳಿಸಿದ್ದು, ಮನೆಯಲ್ಲೇ ಹೋಂ ಕ್ವಾರಂಟೈನ್ನಲ್ಲಿರುವ ಕಾರಣ ಅದು ಮುಗಿದ ಬಳಿಕ ವಶಕ್ಕೆ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಕೃತ್ಯ ಎಸಗುವುದಕ್ಕಿಂತಲೂ ಒಂದು ದಿನ ಮುಂಚಿತವಾಗಿ ವೈದ್ಯ ಆಸ್ಪತ್ರೆ ಸೇರಿಕೊಂಡಿದ್ದರು. ಕೃತ್ಯ ಎಸಗಿರುವುದು ಗೊತ್ತಾಗುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ ಎಂದು ಆಸ್ಪತ್ರೆ ವೈದ್ಯಕೀಯ ಮಂಡಳಿ ತಿಳಿಸಿದೆ.