ನವದೆಹಲಿ: ಸೋಮವಾರದಿಂದ ಕೆಲವು ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಲು ಸಜ್ಜಾಗುತ್ತಿರುವುದರಿಂದ ಲೋಕಸಭಾ ಸಚಿವಾಲಯ ತನ್ನ ಅಧಿಕಾರಿಗಳಿಗೆ ಕಚೇರಿಗೆ ಬರಲು ಅವಕಾಶ ಮಾಡಿಕೊಟ್ಟಿದೆ.
ಸಚಿವಾಲಯ ಹೊರಡಿಸಿದ ಆದೇಶದ ಪ್ರಕಾರ, ಯಾವುದೇ ದಿನದಲ್ಲಿ ಕೇವಲ 33 ಪ್ರತಿಶತದಷ್ಟು ಸಿಬ್ಬಂದಿಗೆ ಮಾತ್ರ ಹಾಜರಾಗಲು ಅವಕಾಶವಿರುತ್ತದೆ. ವ್ಯಕ್ತಿಗಳು ಪರಸ್ಪರ ಕನಿಷ್ಠ 6 ಅಡಿ ದೂರದಲ್ಲಿ ಕುಳಿತು ಕೆಲಸ ಮಾಡಬೇಕಾಗುತ್ತದೆ.
"ಯಾವುದೇ ದಿನ, ಪ್ರತಿ ಶಾಖೆ / ಕಚೇರಿ / ವಿಂಗ್ / ಸಿಇಐ / ಘಟಕದಲ್ಲಿ ಕಚೇರಿಗೆ ಹಾಜರಾಗುವ ಒಟ್ಟು ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಖ್ಯೆ ಒಟ್ಟು ಸಿಬ್ಬಂದಿಯ 33% ಮೀರಬಾರದು. ಈ ಅಧಿಕಾರಿಗಳ ಆಸನದ ನಡುವೆ ಕನಿಷ್ಠ 6 ಅಡಿಗಳಷ್ಟು ಅಂತರ ಕಾಪಾಡಿಕೊಳ್ಳಲಾಗುತ್ತದೆ. ಅಧಿಕಾರಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಊಟದ ಸಮಯದಲ್ಲಿ ಒಟ್ಟುಗೂಡುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ "ಎಂದು ಆದೇಶಿಸಲಾಗಿದೆ.
ಕ್ಯಾಂಟೀನ್ ಮುಚ್ಚಿರುವುದರಿಂದ ಸಿಬ್ಬಂದಿಗೆ ತಮ್ಮ ಆಹಾರ ಮತ್ತು ನೀರನ್ನು ತರಲು ತಿಳಿಸಲಾಗಿದೆ. ಹೆಚ್ಚುವರಿಯಾಗಿ ಅವರಿಗೆ ಒಂದೇ ಸಮಯದಲ್ಲಿ ಊಟ ಮಾಡಲು ಅನುಮತಿಸುವುದಿಲ್ಲ. ಕಾರಿಡಾರ್‌ಗಳಲ್ಲಿ ಯಾವುದೇ ಕೂಟಗಳನ್ನು ಮಾಡುವಂತಿಲ್ಲ.
5 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊಂದಿರುವ ಮಹಿಳಾ ಸಿಬ್ಬಂದಿ ಮತ್ತು ಅನಾರೋಗ್ಯದಿಂದ ಬಳಲುತ್ತಿರುವವರು ಮೇಲಿನ ಅಧಿಕಾರಿಗಳ ಅನುಮತಿ ಪಡೆದ ನಂತರ ಮನೆಯಿಂದ ಕೆಲಸ ಮಾಡಬಹುದು.
ಜಂಟಿ ಕಾರ್ಯದರ್ಶಿ ಮತ್ತು ಅದಕ್ಕಿಂತ ಹೆಚ್ಚಿನ ಶ್ರೇಣಿಯ ಎಲ್ಲಾ ಅಧಿಕಾರಿಗಳು ಎಲ್ಲಾ ಕೆಲಸದ ದಿನಗಳಲ್ಲಿ ಕಚೇರಿಗೆ ಹಾಜರಾಗುತ್ತಾರೆ. ಆದರೆ ಉಪ ಕಾರ್ಯದರ್ಶಿ ಮತ್ತು ಅದಕ್ಕೆ ಸಮಾನವಾದ ನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ತಮ್ಮ ಹೆಚ್ಚುವರಿ ಕಾರ್ಯದರ್ಶಿ ಅಥವಾ ಜಂಟಿ ಕಾರ್ಯದರ್ಶಿ ನಿರ್ಧರಿಸಿದಂತೆ ಕಚೇರಿಗೆ ಹಾಜರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಉಪ ಕಾರ್ಯದರ್ಶಿ ಹುದ್ದೆಗಿಂತ ಕೆಳಗಿರುವವರು ಕೆಲಸದ ಪ್ರಮಾಣವನ್ನು ಅವಲಂಬಿಸಿ ಕಚೇರಿಗೆ ಹಾಜರಾಗುತ್ತಾರೆ. ಎಲ್ಲಾ ಫೈಲ್‌ಗಳು ಇ-ಆಫೀಸ್‌ನಲ್ಲಿ ಎಲೆಕ್ಟ್ರಾನಿಕ್ ಮೋಡ್ ಮೂಲಕ ಮೂವ್ ಆಗಬೇಕು. ಸ್ಪೀಕರ್ ಪರಿಗಣನೆಗೆ ತುರ್ತು ಫೈಲ್‌ಗಳು ಮಾತ್ರ ಇದಕ್ಕೆ ಹೊರತಾಗಿವೆ.
ಸೆಕ್ರೆಟರಿಯೇಟ್‌ನಿಂದ ದೂರದಲ್ಲಿರುವ ಅಥವಾ ಕಂಟೈನ್‌ಮೆಂಟ್ ವಲಯಗಳ ಸಮೀಪದಲ್ಲಿ ವಾಸಿಸುವ ಅಧಿಕಾರಿಗಳು ಮನೆಯಿಂದ ಕೆಲಸ ಮಾಡಲು ಅನುಮತಿ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.