ನವದೆಹಲಿ: ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಹೇರಿದ ಪರಿಣಾಮದಿಂದಾಗಿ ಕಾರ್ಖಾನೆಗಳು ಸೇರಿದಂತೆ ವಿವಿಧ ಉದ್ಯಮಗಳ ಮೇಲೆ ಹಾಗೂ ಆರ್ಥಿಕತೆಯ ಮೇಲೆ ತೀವ್ರ ಪರಿಣಾಮ ಬೀರಿದ್ದು, ಅದೇ ರೀತಿ ವಿದ್ಯುತ್ ಕ್ಷೇತ್ರಕ್ಕೂ ಸಹ ತೀವ್ರ ಪೆಟ್ಟು ನೀಡಿದೆ.
ಲಾಕ್‌ಡೌನ್ ನಿಂದಾಗಿ ಪ್ರತೀ ವರ್ಷ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ವಿದ್ಯುತ್ಗೆ ಇದ್ದ ಬೇಡಿಕೆ ಈ ವರ್ಷ ಇಲ್ಲದಂತಾಗಿದೆ. ವಿದ್ಯುತ್ಗೆ ಬೇಡಿಕೆಯೇ ಇಲ್ಲದ ಪರಿಣಾಮ ಈ ವರ್ಷದ ವಿದ್ಯುತ್ ಆದಾಯ ಪತನವಾಗಿದೆ. 2020-21ರ ವರ್ಷದ ಬೇಡಿಕೆ ಶೇಕಡಾ 1 ರಷ್ಟು ಕುಸಿತ ಕಂಡಿದ್ದು, ಇದು ಸುಮಾರು 36 ವರ್ಷಗಳಲ್ಲಿ ಮೊದಲ ಬಾರಿಗೆ ಎಂಬುದು ಆಘಾತಕಾರಿ ವಿಷಯವಾಗಿದೆ.
ಇದು ಮಾತ್ರವಲ್ಲದೇ, ಮೇ 3 ರ ನಂತರ ಲಾಕ್‌ಡೌನ್ ಮುಂದುವರಿಸುತ್ತಿದ್ದು, ಈ ಲಾಕ್‌ಡೌನ್ ಮುಗಿಯುವವರೆಗೆ ವಿದ್ಯುತ್ ಕ್ಷೇತ್ರದಲ್ಲಿ ಉಂಟಾಗುವ ನಷ್ಟ ತುಂಬಲು ಅಸಾಧ್ಯ ಎಂದೇ ವಿಶ್ಲೇಷಿಸಲಾಗುತ್ತಿದೆ.
ನಷ್ಟ ತುಂಬಲು ಅಸಾಧ್ಯ ಎಂಬ ಅಂಶವು ಸ್ಪಷ್ಟವಾಗಿ ಹೊರಬರುತ್ತಿಲ್ಲ. ಆದರೆ, ಲಾಕ್ಡೌನ್ನಿಂದಾಗಿ ದೊಡ್ಡಮಟ್ಟದಲ್ಲಿ ವಿದ್ಯುತ್ ಬಳಕೆ ಮಾಡುತ್ತಿದ್ದ ಕೈಗಾರಿಕೆಗಳೆಲ್ಲವೂ ವಿದ್ಯುತ್ ಬಳಕೆಯನ್ನು ಸಂಪೂರ್ಣವಾಗಿ ಕಡಿಮೆಗೊಳಿಸಿದೆ. ಕೈಗಾರಿಕೆಗಳು ತಮ್ಮ ಕೆಲಸ ನಿಲ್ಲಿಸಿದ ಪರಿಣಾಮವಾಗಿ ಬೇಡಿಕೆ ತೀವ್ರವಾಗಿ ಕುಸಿದು ಪಾತಾಳ ಸೇರಿದೆ..
ಡಿಸ್ಕಾಮ್‌ಗಳು ಈಗಾಗಲೇ ಕಡಿಮೆ ಬೇಡಿಕೆಯಿಂದ ತತ್ತರಿಸಿ ಹೋಗಿವೆ. ಇದರಿಂದಾಗಿ ವಿದ್ಯುತ್ ಕ್ಷೇತ್ರದ ಆದಾಯ ಮತ್ತು ಪಾವತಿ ಬಾಕಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಿದೆ.
ಡಿಸ್ಕಾಮ್ಗಳ ಸಮಸ್ಯೆಗಳಿಗೆ ಹೆಚ್ಚಿನ ಕಾರಣವೆಂದರೆ, ಲಾಕ್ಡೌನ್ನಿಂದಾಗಿ ಕೈಗಾರಿಕೆ ಮತ್ತು ವಾಣಿಜ್ಯ ಸಂಸ್ಥೆಗಳು ಬಾಗಿಲು ಹಾಕಿರುವುದು. ಈ ಸಂಸ್ಥೆಗಳು ಗ್ರಾಹಕರು ಪಾವತಿಸುವುದಕ್ಕಿಂತ ಹೆಚ್ಚಿನ ಸುಂಕವನ್ನು ಪಾವತಿಸುತ್ತಿದ್ದವು (ಮನೆಗಳಲ್ಲಿನ ಸುಂಕಕ್ಕಿಂತ ಎರಡು ಪಟ್ಟು ಹೆಚ್ಚು). ಆದರೆ ಈಗ ಯಾವ ಉದ್ಯಮವೂ, ಕೈಗಾರಿಕೆಗಳು ಬಾಗಿಲು ತೆರೆಯದ ಕಾರಣದಿಂದಾಗಿ ವಿದ್ಯುತ್ ಕ್ಷೇತ್ರದಲ್ಲಿನ ತೀವ್ರ ಕುಸಿತಕ್ಕೆ ಕಾರಣವಾಗಿದೆ.
ಇದು ಅಖಿಲ ಭಾರತ ಮಟ್ಟದಲ್ಲಿ ಡಿಸ್ಕಾಮ್ಗಳಿಗೆ ನಷ್ಟದ ಮಟ್ಟವನ್ನು ಎಫ್‌ವೈ 2021 ರಲ್ಲಿ 200 ಬಿಲಿಯನ್ ರೂ.ಗಳಷ್ಟು ಹೆಚ್ಚಿಸುವ ಸಾಧ್ಯತೆಯಿದೆ, ಲಾಕ್‌ಡೌನ್ ಅವಧಿಯ ವಿಸ್ತರಣೆಯಿಂದಾಗಿ ಮತ್ತಷ್ಟು ತೊಂದರೆಯುಂಟಾಗುತ್ತದೆ ಮತ್ತು ಸುಂಕದ ಆದೇಶಗಳನ್ನು ನೀಡುವಲ್ಲಿ ಯಾವುದೇ ವಿಳಂಬ ಅಥವಾ ಅನುಮೋದಿತ ಅಸಮರ್ಪಕ ಸುಂಕಗಳು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಐಸಿಆರ್ಎ ತನ್ನ ವರದಿಯಲ್ಲಿ ತಿಳಿಸಿದೆ.