ನವದೆಹಲಿ: ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತೊಮ್ಮೆ ಲಾಕ್‌ಡೌನ್ ವಿಸ್ತರಿಸಲು ತೀರ್ಮಾನಿಸಿವೆ. ಕನಿಷ್ಠ ಜೂನ್ 15ರ ವರೆಗೆ ಲಾಕ್‌ಡೌನ್ ವಿಸ್ತರಿಸಲು ಕೇಂದ್ರ ಯೋಜಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಮತ್ತೆ ಲಾಕ್‌ಡೌನ್ ವಿಸ್ತರಿಸಿದರೆ ನಿಯಮಗಳನ್ನು ಬಿಗಿಗೊಳಿಸಬೇಕೆ ಅಥವಾ ಸಡಿಲಗೊಳಿಸಬೇಕೆ ಎಂಬ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ. ಶಿಕ್ಷಣ ಸಂಸ್ಥೆಗಳು ಮತ್ತು ಮೆಟ್ರೋ ಸೇವೆಗಳನ್ನು ಪುನಾರಂಭಿಸುವ ಕುರಿತು ಆಯಾ ರಾಜ್ಯಗಳೇ ತೀರ್ಮಾನ ತೆಗೆಕೊಳ್ಳುವಂತೆ ಕೇಂದ್ರ ಸೂಚಿಸುವ ಸಾಧ್ಯತೆ ಇದೆ. ದೇವಾಲಯಗಳು, ಮಸೀದಿಗಳು ಮತ್ತು ಚರ್ಚುಗಳ ಬಗ್ಗೆ ಕೂಡ ರಾಜ್ಯ ಸರ್ಕಾರಗಳು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬಹುದು.
ರದ್ದತಿ ಅನಿವಾರ್ಯ:
ಅಂತಾರಾಷ್ಟ್ರೀಯ ವಿಮಾನಯಾನ ರಾಜಕೀಯ ಸಮ್ಮೇಳನಗಳು, ಮಾಲ್‌ಗಳು ಮತ್ತು ಚಿತ್ರಮಂದಿರಗಳ ಮೇಲಿನ ನಿಷೇಧವು ಮುಂದುವರಿಯುವ ಸಾಧ್ಯತೆಯಿದೆ. ಶೇಕಡಾ 80 ರಷ್ಟು ಕೊರೊನಾ ಪ್ರಕರಣಗಳು ದಾಖಲಾಗಿರುವ 30 ಪುರಸಭೆಗಳ ಮೇಲೆ ಕಠಿಣ ನಿರ್ಬಂಧ ಹೇರುವ ಸಾಧ್ಯತೆ ಇದೆ. ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ರಾಜಸ್ಥಾನ, ಉತ್ತರ ಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಪಂಜಾಬ್ ಮತ್ತು ಒಡಿಶಾದಲ್ಲಿ 30 ಪುರಸಭೆಗಳಿವೆ.
ವಲಯವಾರು ಮಾರ್ಗಸೂಚಿಗಳು:
ಅಸೋಸಿಯೇಷನ್ ಆಫ್ ಹೆಲ್ತ್ ಕೇರ್ ಪ್ರೊವೈಡರ್ಸ್ ಇಂಡಿಯಾದ ಮಹಾನಿರ್ದೇಶಕ ಡಾ. ಗಿರಿಧರ್ ಜ್ಞಾನಿ ಅವರು ಈಟಿವಿ ಭಾರತ ಜೊತೆ ಮಾತನಾಡಿ ಲಾಕ್‌ಡೌನ್ ವಿಸ್ತರಿಸಿದರೆ, ವಲಯ ನಿರ್ದಿಷ್ಟ ಮಾರ್ಗಸೂಚಿಗಳನ್ನು ಕಾರ್ಯಗತಗೊಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯದ ಅಧಿಕಾರಿಗಳೊಂದಿಗೆ ಚರ್ಚೆ:
ವಿವಿಧ ನಗರಗಳಲ್ಲಿ ಕೊರೊನಾ ಹೆಚ್ಚುತ್ತಿರುವ ಬಗ್ಗೆ ಕೇಂದ್ರ ಸರ್ಕಾರ ಪರಿಶೀಲಿಸುತ್ತಿದೆ. ಆದರೆ, ಲಾಕ್‌ಡೌನ್ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು, ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾ ಮತ್ತು ಕೇಂದ್ರ ಆರೋಗ್ಯ ಕಾರ್ಯದರ್ಶಿಗಳು, ವಿವಿಧ ರಾಜ್ಯಗಳ ಮುಖ್ಯ ಕಾರ್ಯುದರ್ಶಿಗಳು, ಆರೋಗ್ಯ ಕಾರ್ಯದರ್ಶಿಗಳು ಮತ್ತು ಪುರಸಭೆ ಆಯುಕ್ತರೊಂದಿಗೆ ಚರ್ಚೆ ನಡೆಸಿದ್ದಾರೆ.
ಅಮಿತ್ ಶಾ ಮೋದಿ ಭೇಟಿ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಪ್ರಧಾನಿ ಮೋದಿಯವರನ್ನು ಭೇಟಿಯಾಗಿದ್ದರು. ಲಾಕ್‌ಡೌನ್ ವಿಚಾರದಲ್ಲಿ ವಿವಿಧ ಮುಖ್ಯಮಂತ್ರಿಗಳ ಅಭಿಪ್ರಾಯ ಮತ್ತು ಸಲಹೆಗಳ ಬಗ್ಗೆ ಮೋದಿಗೆ ತಿಳಿಸಿದ್ದಾರೆ. ಇಂದು ಅಥವಾ ನಾಳೆ ಲಾಕ್‌ಡೌನ್ ವಿಸ್ತರಣೆಯ ಕುರಿತು ಕೇಂದ್ರವು ಪ್ರಮುಖ ಪ್ರಕಟಣೆ ಹೊರಡಿಸುವ ಸಾಧ್ಯತೆ ಇದೆ.