ನವದೆಹಲಿ : ತಿಂಗಳಿಗೊಮ್ಮೆ ಮನ್ ಕಿ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡುವ ಮೋದಿ, ಈ ಬಾರಿಯ ಕಾರ್ಯಕ್ರಮದಲ್ಲಿ ಗಡಿ ಭಾಗದಲ್ಲಿ ದೇಶಕ್ಕಾಗಿ ಹೋರಾಟ ನಡೆಸುತ್ತಿರುವ ಸೈನಿಕರಿಗಾಗಿ ಹಬ್ಬದ ಪ್ರಯುಕ್ತ ನಿಮ್ಮ ಮನೆಗಳಲ್ಲಿ ದೀಪ ಬೆಳಗಿ ಐಕ್ಯತೆ ಕಾಪಾಡಿ ಎಂದು ಜನರಲ್ಲಿ ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಐಕ್ಯತೆ ಎಂಬುದು ಶಕ್ತಿ, ಐಕ್ಯತೆ ಎಂಬುದು ಸಾಮರ್ಥ್ಯ, ಐಕ್ಯತೆ ಎಂಬುದು ಅಭಿವೃದ್ಧಿಯ ಮಾನದಂಡ. ನಮ್ಮ ನಡುವೆ ವಿಷ ಬೀಜವನ್ನು ಬಿತ್ತುವ ದುಷ್ಟರಿದ್ದರೂ ಅಂತವರಿಗೆ ನಾವುಗಳು ಸರಿಯಾದ ಉತ್ತರ ನೀಡುತ್ತಲೇ ಬಂದಿದ್ದೇವೆ ಎಂದು ಅಕ್ಟೋಬರ್ 31ರಂದು ನಡೆಯುವ ಐಕ್ಯತಾ ದಿನದ ಅಂಗವಾಗಿ ಮಾತನಾಡಿದ್ದಾರೆ.
ಈ ಹಬ್ಬದ ದಿನದಂದೂ ನಮ್ಮ ಒಳಿತಿಗಾಗಿ ನಮ್ಮ ಹೆಮ್ಮೆಯ ಸೈನಿಕರು ದೇಶ ಕಾಯುವ ಕೆಲಸ ಮಾಡುತ್ತಿದ್ದಾರೆ. ಭಾರತಾಂಬೆಯ ಈ ಧೈರ್ಯಶಾಲಿ ಪುತ್ರರು ಮತ್ತು ಹೆಣ್ಣುಮಕ್ಕಳ ಗೌರವಾರ್ಥ ಮನೆಗಳಲ್ಲಿ ದೀಪಗಳನ್ನು ಬೆಳಗಿಸಿ ಗೌರವಿಸಬೇಕು ಅಂತ ಮೋದಿ ದೇಶದ ಜನರಲ್ಲಿ ಕೇಳಿಕೊಂಡಿದ್ದಾರೆ. ನಮ್ಮ ಸೃಜನಶೀಲತೆ ಮತ್ತು ಪ್ರೀತಿಯ ಮೂಲಕ 'ಏಕ್ ಭಾರತ್ ಶ್ರೇಷ್ಠ ಭಾರತ್'ಗಾಗಿ ಸಣ್ಣ ಸಣ್ಣ ಕಾರ್ಯಗಳನ್ನು ಮಾಡಲು ಪ್ರಯತ್ನಿಸಬೇಕು ಎಂದಿದ್ದಾರೆ.
ಇನ್ನು ನರೇಂದ್ರ ಮೋದಿ ಇದೇ ಅಕ್ಟೋಬರ್ 31 ರಾಷ್ಟ್ರೀಯ ಐಕ್ಯತಾ ದಿನದ ಅಂಗವಾಗಿ ಗುಜರಾತ್ನ ಸರ್ದಾರ್ ವಲ್ಲಬಭಾಯ್ ಪಟೇಲ್ ಅವರ ಪ್ರತಿಮೆಗೆ ಭೇಟಿ ಕೊಡಲಿದ್ದಾರೆ. ಸರ್ದಾರ್ ಜಿ ಐಕ್ಯತೆಯನ್ನು ಕಾಪಾಡಲು ಕಠಿಣ ಪರಿಶ್ರಮ ಪಟ್ಟಿದ್ದಾರೆ. ಆ ಐಕ್ಯತೆಯನ್ನು ನಾವೆಲ್ಲರೂ ಮುಂದುವರೆಸಿಕೊಂಡು ಹೋಗಲು ಶ್ರಮಿಸಬೇಕೆಂದು ಮನ್ ಕಿ ಬಾತ್ನಲ್ಲಿ ಕೇಳಿಕೊಂಡರು.
ಇನ್ನು ಅಕ್ಟೋಬರ್ 31, 1984 ರಂದು ಹತ್ಯೆಗೀಡಾದ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಗೌರವ ಸಲ್ಲಿಸಿದರು.