ಕೋಯಿಕ್ಕೋಡ್: ದೇಶದಲ್ಲಿ ವಿಧಿಸಿರುವ ಸುಧೀರ್ಘ ಲಾಕ್ ಡೌನ್ ಪುಸ್ತಕ ಓದುಗ ವಲಯವೊಂದು ಕಟ್ಟುವ ಭರವಸೆ ಮೂಡಿಸಿದೆ.
ಹೌದು, ಕೇರಳದ ಬಾಲುಸ್ಸೇರಿಯ ಥ್ರಿಕುಟ್ಟಿಸ್ಸೆರಿಯಲ್ಲಿರುವ 'ಪುಸ್ತಕಕ್ಕೂಡ್' ಎಂಬ ಗ್ರಂಥಾಲಯವು ಲಾಕ್ ಡೌನ್ ವೇಳೆ ಜನರ ಮನೆ ಬಾಗಿಲಿಗೆ ಪುಸ್ತಕಗಳನ್ನು ತಲುಪಿಸಿ, ಓದಿಸುವ ಹೊಸ ಪ್ರಯತ್ನ ಮಾಡಿ ಅದರಲ್ಲಿ ಯಶ ಕಂಡಿದೆ.
ಪುಸ್ತಕಕ್ಕೂಡ್ ಗ್ರಂಥಾಲಯವು ಮನೆಯ ಸದಸ್ಯರ ಹೆಸರನ್ನು ನೋಂದಾಯಿಸಿಕೊಂಡು ನಂತರ ಎರಡು ಮೂರು ದಿನಗಳ ಅವಧಿಗೆ ಪುಸ್ತಕ ನೀಡುತ್ತಿದ್ದು, ಪುಸ್ತಕ ಓದಿದ ಜನರು ಬಳಿಕ ಅದರ ವಿಮರ್ಶೆಯನ್ನು ಬರೆಯಬೇಕಾಗುತ್ತದೆ. ಸದ್ಯ ಗ್ರಂಥಾಲಯದ ಈ ವಿನೂತನ ಯೋಜನೆ ಯಶಕಂಡಿದ್ದು, ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಂಥಾಲಯದ ಅಧ್ಯಕ್ಷ ಕೆ.ಕೆ.ಮೋಹನನ್, ಜನರ ಪ್ರತಿಕ್ರಿಯೆಗಳ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು, ನಾವು ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದೇವೆ ಮತ್ತು ಜನರು ತಮ್ಮ ಪುಸ್ತಕಗಳನ್ನು ಓದಿ ಮುಗಿಸಿದ ನಂತರ ಪುಸ್ತಕ ಬದಲಾಯಿಸಕೊಡಲು ಕರೆ ಮಾಡುತ್ತಾರೆ. ನಾವು ಈಗಾಗಲೇ ಅನೇಕ ಕರೆಗಳನ್ನು ಸ್ವೀಕರಿಸಿದ್ದೇವೆ ಎಂದಿದ್ದಾರೆ.
ಗ್ರಂಥಾಲಯದ ಈ ವಿಶಿಷ್ಟ ಯೋಜನೆಯ ಬಗ್ಗೆ ಪೋಷಕರು ಕೂಡ ಸಂತಸ ವ್ಯಕ್ತಪಡಿಸಿದ್ದು, ಮಕ್ಕಳು ಲಾಕ್ ಡೌನ್ ವೇಳೆ ಮನೆಯಲ್ಲೇ ಇರುವುದರಿಂದ ಏನು ಕೆಲಸ ಇರುವುದಿಲ್ಲ. ಹೀಗಾಗಿ, ಗ್ರಂಥಾಲಯದಿಂದ ಪುಸ್ತಕಗಳನ್ನು ತರಿಸಿಕೊಂಡು ಓದುತ್ತಿದ್ದಾರೆ. ಅಲ್ಲದೆ ಪುಸ್ತಕ ಓದಿದ ಬಳಿಕ ವಿಮರ್ಶೆ ಬರೆಯವುದು ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪುಸ್ತಕ ಓದಿದ ಬಳಿಕ ಉತ್ತಮವಾದ ವಿಮರ್ಶೆ ಬರೆದವರಿಗೆ ಗ್ರಂಥಾಲಯ ಬಹುಮಾನವನ್ನು ಘೋಷಿಸಿದ್ದು, ಲಾಕ್ ಡೌನ್ ಮುಕ್ತಾಯವಾದ ಬಳಿಕ ಬಹುಮಾನ ವಿತರಿಸುವುದಾಗಿ ತಿಳಿಸಿದೆ.