ನವದೆಹಲಿ: ಕೋಯಿಕೋಡ್ ವಿಮಾನ ದುರಂತ ಸಂಭವಿಸಿದ ಬಳಿಕ, ಭಾರತೀಯ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA) ಎಚ್ಚೆತ್ತುಕೊಂಡಿದೆ. ಏರ್ ಇಂಡಿಯಾ ಹಾಗೂ ಸ್ಪೈಸ್ ಜೆಟ್ನಿಂದ ಆರಂಭಿಸಿ, ಎಲ್ಲಾ ಭಾರತೀಯ ವಿಮಾನಗಳ ವಿಶೇಷ ಸುರಕ್ಷತಾ ಪರಿಶೋಧನೆಯನ್ನು ಪ್ರಾರಂಭಿಸಿದೆ.
ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್, ಎಲ್ಲಾ ಭಾರತೀಯ ವಿಮಾನಯಾನ ಸಂಸ್ಥೆಗಳ ಸುರಕ್ಷತೆಯ ಪರಿಶೀಲನೆ ನಡೆಸುತ್ತದೆ. ಇದಕ್ಕಾಗಿ ವಿಶೇಷ ಸಮಿತಿಯನ್ನೂ ರಚಿಸಲಾಗುತ್ತಿದೆ. ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಸುರಕ್ಷತಾ ಪರಿಶೀಲನೆಯ ಮೊದಲ ಹಂತ ಈಗಾಗಲೇ ಪ್ರಾರಂಭವಾಗಿದೆ ಎಂದು ಡಿಜಿಸಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಮಾನ ಕಾರ್ಯಾಚರಣೆಯ ಗುಣಮಟ್ಟದ ಭರವಸೆ (FOQA)ಯ ಸುರಕ್ಷತಾ ಪರಿಶೋಧನೆಯನ್ನು ಡಿಜಿಸಿಎ ಪ್ರಾರಂಭಿಸಿದೆ. ಮುಖ್ಯವಾಗಿ ಇದು ವಿಮಾನದ ಕಾರ್ಯಾಚರಣೆ, ಎಂಜಿನಿಯರಿಂಗ್(ನಿರ್ವಹಣೆ), ವೈದ್ಯಕೀಯ, ತರಬೇತಿ ಮತ್ತು ಸುರಕ್ಷತೆಯ ಮೇಲೆ ಇರುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಿಶೇಷವೆಂದರೆ, ಡಿಜಿಸಿಎ ಏರ್ ಇಂಡಿಯಾ ಎಕ್ಸ್ಪ್ರೆಸ್ನ ಸುರಕ್ಷತೆಯನ್ನು ಪರಿಶೀಲಿಸುತ್ತಿಲ್ಲ. ಕೋಯಿಕೋಡ್ ವಿಮಾನ ದುರಂತದ ತನಿಖೆಗಾಗಿ ಸರ್ಕಾರ ಈಗಾಗಲೇ ಐದು ಸದಸ್ಯರ ತಂಡವನ್ನು ನೇಮಕ ಮಾಡಿರುವುದರಿಂದ ಡಿಜಿಸಿಎ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸುರಕ್ಷತಾ ತನಿಖೆಯನ್ನು ಬಿಟ್ಟುಬಿಟ್ಟಿದೆ.
ಮುಂಬೈ, ಕೊಚ್ಚಿ, ತಿರುವನಂತಪುರಂ ಸೇರಿದಂತೆ, ಭಾರಿ ಮಳೆ ಬೀಳುವ ಪ್ರದೇಶಗಳ 12ರಲ್ಲಿ 10 ವಿಮಾನ ನಿಲ್ದಾಣಗಳಲ್ಲಿ ವಿಮಾನ ಸುರಕ್ಷತಾ ಪರಿಶೋಧನೆಯನ್ನು ಡಿಜಿಸಿಎ ಪ್ರಾರಂಭಿಸಿದೆ.