ಪಣಜಿ (ಗೋವಾ): ಕರ್ನಾಟಕ ಸರ್ಕಾರ ಮಹಾದಾಯಿ ನದಿಯನ್ನು ತಿರುಗಿಸಿದೆ, ಹೀಗಾಗಿ ರಾಜ್ಯದಲ್ಲಿ ನದಿ ನೀರಿನ ಹರಿವು ಕಡಿಮೆ ಆಗಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಮಾತನಾಡಿರುವ ಅವರು, ಕರ್ನಾಟಕ ನದಿಯ ನೀರನ್ನ ತಿರುಗಿಸಿರುವುದರಿಂದ ರಾಜ್ಯದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಈ ಬಗ್ಗೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಗಮನಕ್ಕೆ ತಂದಿದ್ದೇವೆ. ನೀರಿನ ದೀರ್ಘಕಾಲಿಕ ಹರಿವು ಗೋವಾದ ವನ್ಯಜೀವಿಗಳಿಗೆ ಅವಶ್ಯಕ ಎಂದು ತಿಳಿಸಿದ್ದೇವೆ ಎಂದಿದ್ದಾರೆ.
ಮಹಾದಾಯಿ ವಿಚಾರದಲ್ಲಿ ನಮ್ಮ ಸರ್ಕಾರ ಗಂಭೀರವಾಗಿದೆ ಎಂದಿರುವ ಸಾವಂತ್, ಮಹಾದಾಯಿ ನನಗೆ ತಾಯಿಗಿಂತ ಹೆಚ್ಚು. ಈ ವಿಷಯದಲ್ಲಿ ನಾವು ಎಲ್ಲಿಯೂ ರಾಜಿ ಮಾಡಿಕೊಂಡಿಲ್ಲ. ಕಳೆದ 20 ವರ್ಷದಿಂದ ಮಹಾದಾಯಿ ವಿಚಾರದಲ್ಲಿ ನಾನೂ ಹೋರಾಟ ಮಾಡಿಕೊಂಡು ಬಂದಿದ್ದೇನೆ ಎಂದಿದ್ದಾರೆ. ಇದೇ ವಿಚಾರ ಕುರಿತು ಸುಪ್ರೀಂಕೋರ್ಟ್ನಲ್ಲಿ ವಿಶೇಷ ಅರ್ಜಿ ಸಲ್ಲಿಸಲಾಗಿದ್ದು, ಕೋರ್ಟ್ನಲ್ಲಿ ತೀರ್ಮಾನ ಮಾಡಲಾಗುವುದು ಎಂದಿದ್ದಾರೆ.