ಮಧ್ಯಪ್ರದೇಶ: ನೀವು ಮಾಂಸಾಹಾರಿಗಳಾಗಿದ್ದರೆ ಕಡಕ್ನಾಥ್ ಕೋಳಿಯ ಹೆಸರನ್ನು ಕೇಳಿರಲೇಬೇಕು. ಇದರ ಹೆಸರು ಕೇಳುತ್ತಿದ್ದಂತೆಯೇ ಅನೇಕ ಜನರ ಬಾಯಲ್ಲಿ ನೀರು ಬರುತ್ತದೆ. ಅಂದಹಾಗೆ ಇದರ ಮಾಂಸ ರುಚಿ ಎನ್ನುವುದೇ ಇದರ ವಿಶೇಷ ಎಂದಲ್ಲ. ವಿವಿಧ ಪೋಷಕಾಂಶಗಳಿಂದ ಕೂಡಿರುವ ಈ ಕೋಳಿಯ ಮಾಂಸವನ್ನ ಅಸ್ತಮಾ, ಮೂತ್ರಪಿಂಡ ಕಾಯಿಲೆ, ಕ್ಷಯ, ಹೃದಯ ಮತ್ತು ಮಧುಮೇಹ ಇತ್ಯಾದಿ ಕಾಯಿಲೆಗಳ ಔಷಧಿಗಳಲ್ಲಿ ಬಳಸಲಾಗುತ್ತದೆ.
ಕಪ್ಪು ಬಣ್ಣವೇ ಕಡಕ್ನಾಥ್ನ ವಿಶೇಷ ಗುರುತು: ಕಡಕ್ನಾಥ್ ಕೋಳಿಯ ಮೈಬಣ್ಣ ಮಾತ್ರ ಕಪ್ಪು ಅಂದುಕೊಂಡರೆ, ಅದರ ರಕ್ತವು ಕೂಡ ಕಪ್ಪು ಬಣ್ಣದ್ದಾಗಿದೆ. ಅದರ ಮಾಂಸದಲ್ಲಿ ಕಬ್ಬಿನಾಂಶವಿರುವುದು ಸಾಬೀತಾಗಿದ್ದು, ಬಂಜೆತನ ಹಾಗೂ ಮುಟ್ಟಿನ ಸಮಸ್ಯೆಗಳು ಸೇರಿದಂತೆ ಇತರ ಸ್ತ್ರೀರೋಗಗಳಿಗೆ ರಾಮಬಾಣವಾಗಿದೆ. ಅಲ್ಲದೇ ಹೆರಿಗೆಯ ಬಳಿಕ ಈ ಕೋಳಿಯ ಮೊಟ್ಟೆಗಳನ್ನು ಸೇವಿಸಲು ವೈದ್ಯರು ಸಲಹೆ ನೀಡುತ್ತಾರೆ.
ಚಳಿಗಾಲದಲ್ಲಿ ವಿಶೇಷ ಬೇಡಿಕೆ ಹಾಗೂ ಬೆಲೆ ಏರಿಕೆ: ಚಳಿಗಾಲದಲ್ಲಿ ಕಡಕ್ನಾಥ್ ಕೋಳಿಯ ಬೇಡಿಕೆ ಹೆಚ್ಚಾಗುತ್ತದೆ. ದೊಡ್ಡ ಪ್ರಮಾಣದಲ್ಲಿ ಇದರ ಮಾರಾಟವಾಗಲಿದ್ದು, ಇದಕ್ಕಾಗಿ ಸರ್ಕಾರವು ಜಾನುವಾದಲ್ಲಿ ಪ್ರಾಣಿ ಸಾಕಣೆ ಇಲಾಖೆಯ ವತಿಯಿಂದ ಕೋಳಿ ಸಾಕಾಣಿಕೆ ಕೇಂದ್ರವನ್ನು ಸ್ಥಾಪಿಸಿದೆ. ಇಲ್ಲಿ ಸುಮಾರು ಒಂದೂವರೆ ಮಿಲಿಯನ್ ಕಡಕ್ನಾಥ್ ಕೋಳಿಗಳನ್ನು ತಯಾರಿಸಲಾಗುತ್ತದೆ. ಬೇಡಿಕೆ ಹೆಚ್ಚಾಗುವುದರಿಂದ ಅದರ ಬೆಲೆ ಎರಡರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತದೆ.
ಕಡಕ್ನಾಥ್ ಉತ್ಪಾದನೆಗೆ ಕೃಷಿ ವಿಜ್ಞಾನ ಕೇಂದ್ರದ ಕಠಿಣ ಪರಿಶ್ರಮ: ಕಡಕ್ನಾಥ್ ಕೋಳಿಯ ಉತ್ಪಾದನೆಯ ಹಿಂದೆ ಕೃಷಿ ವಿಜ್ಞಾನ ಕೇಂದ್ರದ ಪರಿಶ್ರಮವಿದೆ. ಕೃಷಿ ವಿಜ್ಞಾನ ಕೇಂದ್ರವು ದೇಶಾದ್ಯಂತ ಕಡಕ್ನಾಥ್ ಕೋಳಿಗಳ ಉತ್ಪಾದನೆಯನ್ನು ಉತ್ತೇಜಿಸಲು ರೈತರನ್ನು ಪ್ರೇರೇಪಿಸುತ್ತಿದೆ.