ನವದೆಹಲಿ: ಏಳು ವರ್ಷಗಳ ನಂತರ ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಲಾಗಿದ್ದು, ಅಂತಿಮವಾಗಿ ನ್ಯಾಯ ದೊರಕಿದೆ. ಈ ರೀತಿಯ ಅಪರಾಧ ಮಾಡಿದರೆ ಕಾನೂನು ಅಪರಾಧಿಗಳನ್ನು ಬಿಡುವುದಿಲ್ಲ ಎಂಬುದು ಸಾಬೀತಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.
ಬಹುಶಃ ಇನ್ನು ಮುಂದೆ ದೇಶದಲ್ಲಿ ಇಂಥ ಅಪರಾಧಗಳು ಕಡಿಮೆಯಾಗಬಹುದು ಎಂದು ರೇಖಾ ಶರ್ಮಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪನೆಗೆ ಒತ್ತಾಯ:
ದೇಶದಲ್ಲಿ ಇಂತಹ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ತುರ್ತು ನ್ಯಾಯಾಲಯಗಳು ಅಥವಾ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯ ಸ್ಥಾಪನೆ ಆಗಬೇಕು ಎಂದರು.
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಪ್ರತಿಕ್ರಿಯೆ:
ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಪ್ರತಿಕ್ರಿಯಿಸಿ, ಇದು ಇಡೀ ದೇಶದ ಗೆಲುವು. ನಿರ್ಭಯಾ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಇಡೀ ದೇಶ ಪ್ರತಿಭಟನೆಗಿಳಿದಿತ್ತು. ಈಗ ನಾವು ದೇಶದಲ್ಲಿ ಕಠಿಣ ನ್ಯಾಯ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಆಗ ಖಂಡಿತವಾಗಿಯೂ ದೇಶದಲ್ಲಿ ಬದಲಾವಣೆ ಆಗುತ್ತದೆ ಎಂದರು.
ನಿರ್ಭಯಾ ಅತ್ಯಚಾರಿಗಳನ್ನು ಸಮರ್ಥಿಸಿಕೊಂಡ ವಕೀಲ ಎ.ಪಿ. ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸ್ವಾತಿ ಮಾಲಿವಾಲ್, ಇಂತಹ ಘೋರ ಅಪರಾಧಗಳನ್ನು ಮಾಡಿದ ಅಪರಾಧಿಗಳನ್ನು ಉಳಿಸಲು ಅವರನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದು ತಪ್ಪು ಎಂದು ಕಿಡಿಕಾರಿದ್ರು.