ಶ್ರೀನಗರ: ಜಮ್ಮು ಕಾಶ್ಮೀರದ ಮೊದಲ ಟ್ಯಾಕ್ಸಿ ಅಗ್ರಿಗೇಟರ್ ಸೇವೆಯಾದ ಜೆಕೆ ಕ್ಯಾಬ್ಸ್ ಶುಕ್ರವಾರ ಮಧ್ಯಾಹ್ನದಿಂದ ಶ್ರೀನಗರದ ರಸ್ತೆಗಳಲ್ಲಿ ಸಂಚರಿಸಲಿದೆ. ಉಬರ್, ಓಲಾ ಮಾದರಿಯ ಟ್ಯಾಕ್ಸಿ ಸೇವೆಯು ಶ್ರೀನಗರ ಯುವಕರ ಪ್ರಾರಂಭಿಕ ಉದ್ಯಮವಾಗಿದೆ. ಜೆಕೆ ಕ್ಯಾಬ್ಸ್ ಸೇವೆಯೂ ವ್ಯಾಪಾರ ಆಡಳಿತ, ಲಾಜಿಸ್ಟಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಅರ್ಹತೆಯನ್ನು ಪಡೆದ ಟ್ಯಾಕ್ಸಿ ಚಾಲಕರಿಗೆ ಉದ್ಯೋಗ ಮತ್ತು ಬೆಂಬಲವನ್ನು ನೀಡುವ ಗುರಿ ಹೊಂದಿದೆ.
"ವಿಶ್ವಾಸಾರ್ಹ, ಸುರಕ್ಷಿತ, ಕೈಗೆಟುಕುವ ಮತ್ತು ಪರಿಣಾಮಕಾರಿ ಸಾರಿಗೆ ಸೇವೆಯನ್ನು ಒದಗಿಸುವುದರ ಜೊತೆಗೆ ಯುವಕರಿಗೆ ಉದ್ಯೋಗವನ್ನು ಸೃಷ್ಟಿಸಲು ನಾವು 300 ಕ್ಯಾಬ್ ಮಾಲೀಕರು/ಚಾಲಕರೊಂದಿಗೆ ಕೈಜೋಡಿಸಿದ್ದೇವೆ" ಎಂದು ಜೆಕೆ ಕ್ಯಾಬ್ಸ್ನ ಮಾಲೀಕ ಫಾಜಿಲ್ ಶೋಕಾತ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ಫಾಜಿಲ್ ಶೋಕಾತ್ ಶ್ರೀನಗರದ ಸನತ್ ನಗರದ ನಿವಾಸಿಯಾಗಿದ್ದು, ಬಿಸಿನೆಸ್ ಅಡ್ಮಿನಿಸ್ಟ್ರೇಶನ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. "ನಾನು ಕಳೆದ ಎರಡು ವರ್ಷಗಳಿಂದ ಈ ಯೋಜನೆಗೆ ಸಂಬಂಧಿಸಿದಂತೆ ಕೆಲಸ ಮಾಡುತ್ತಿದ್ದೆ, ಆದರೆ ಹಣಕಾಸಿನ ತೊಂದರೆಯಿಂದಾಗಿ ಈ ಸೇವೆಯನ್ನು ಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಶುಕ್ರವಾರ ಈ ಸೇವೆಯನ್ನು ಪ್ರಾರಂಭಿಸಲಾಗುವುದು" ಎಂದು ಫಾಜಿಲ್ ಶೋಕಾತ್ ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ, ಚಾಲಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದರ ಜೊತೆಗೆ ಕಡಿಮೆ ಶುಲ್ಕದಲ್ಲಿ ನಿವಾಸಿಗಳಿಗೆ ತೊಂದರೆಯಿಲ್ಲದ ಸಾರಿಗೆಯನ್ನು ಒದಗಿಸುವ ಉದ್ದೇಶವನ್ನು ಈ ಸೇವೆ ಹೊಂದಿದೆ.
ಫಾಜಿಲ್ ಪ್ರಕಾರ, ಓಲಾ ಮತ್ತು ಉಬರ್ ಟ್ಯಾಕ್ಸಿ ಸೇವೆಯಂತೆಯೇ ಜೆಕೆ ಕ್ಯಾಬ್ಸ್ ಸೇವೆಯೂ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿರುತ್ತದೆ. ಅಕ್ಟೋಬರ್ ವೇಳೆಗೆ ಮೊಬೈಲ್ ಅಪ್ಲಿಕೇಶನ್ ಸಿದ್ಧವಾಗಲಿದೆ. 2 ಜಿ ವೇಗದಲ್ಲಿ ಸುಗಮವಾಗಿ ಕಾರ್ಯನಿರ್ವಹಿಸಲು ಅಪ್ಲಿಕೇಶನ್ನನ್ನು ವಿನ್ಯಾಸಗೊಳಿಸಲಾಗುತ್ತಿದೆ. ನಂತರ, ಗ್ರಾಹಕರು ಯಾವುದೇ ಮೋಡ್ ಬಳಸಿ ಎಲ್ಲಿಗಾದರೂ ಬುಕ್ ಮಾಡಬಹುದು ಎಂದರು.