ಮಯೂರ್ಬಂಜ್(ಒಡಿಶಾ): ಪರಸ್ಪರ ಪ್ರೀತಿಸುತ್ತಿದ್ದ ಜೋಡಿಗೆ ಇಲ್ಲಿನ ನ್ಯಾಯ ಪಂಚಾಯ್ತಿ ಒಂದು ವಿಚಿತ್ರ ರೀತಿಯ ಶಿಕ್ಷೆ ನೀಡಿ ಆದೇಶ ಹೊರಡಿಸಿರುವ ಅಮಾನವೀಯ ಘಟನೆ ಒಡಿಶಾದ ಮಯೂರ್ಬಂಜ್ನಲ್ಲಿ ನಡೆದಿದೆ.
ಜೂನ್ 22ರಂದು ತಾನು ಪ್ರೀತಿಸುತ್ತಿದ್ದ ಯುವತಿಯನ್ನ ಮೀಟ್ ಮಾಡಲು ಯುವಕ ಪಕ್ಕದ ಊರಿಗೆ ಹೋಗಿದ್ದಾನೆ. ಈ ವೇಳೆ ಸ್ಥಳೀಯರು ಲವರ್ಸ್ಗಳನ್ನ ಒಂದೇ ರೂಂನಲ್ಲಿರುವುದನ್ನ ನೋಡಿ ಕೂಡಿ ಹಾಕಿದ್ದಾರೆ. ಅಷ್ಟೇ ಅಲ್ಲ ಮರುದಿನ ನ್ಯಾಯ ಪಂಚಾಯ್ತಿ ಎದುರು ಹಾಜರು ಪಡಿಸಿದ್ದಾರೆ.
ಈ ವೇಳೆ ಸ್ಥಳೀಯ ಪಂಚಾಯ್ತಿ, ಅವರಿಬ್ಬರ ತಲೆ ಬೋಳಿಸಿ, ಮೆರವಣಿಗೆ ಮಾಡುವಂತೆ ಆದೇಶ ನೀಡಿದೆ. ಅದೇ ರೀತಿ, ಗ್ರಾಮಸ್ಥರು ಲವರ್ಸ್ಗಳ ತಲೆ ಬೋಳಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಜತೆಗೆ ಅವರಿಬ್ಬರ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಇವರಿಬ್ಬರು ಬೇರೆ ಬೇರೆ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡೂ ಕುಟುಂಬಗಳಿಂದ ಪ್ರೀತಿಗೆ ವಿರೋಧ ವ್ಯಕ್ತವಾಗಿತ್ತು ಎಂದು ತಿಳಿದು ಬಂದಿದೆ.
ಇನ್ನು ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಇವರ ರಕ್ಷಣೆ ಮಾಡಿ, ಗ್ರಾಮದ 21 ಜನರನ್ನ ಬಂಧಿಸಿ, ಅವರ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ. ಪ್ರಕರಣದ ತನಿಖೆ ನಡೆಸುತ್ತಿದ್ದು, ಇನ್ನು ಹಲವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.