ನಿತ್ಯದ ವಹಿವಾಟಿನಲ್ಲಿ ವ್ಯಾಪಾರವು ಹಲವಾರು ಗಂಡಾಂತರಗಳು, ಸಮಸ್ಯೆಗಳು ಹಾಗೂ ಸವಾಲುಗಳನ್ನು ಎದುರಿಸುತ್ತದೆ. ಈ ಪೈಕಿ ಹಲವಾರು ವಿಷಯಗಳು ಅದರ ಲಾಭ ಮತ್ತು ನಷ್ಟಗಳ ಮೇಲೆ ನೇರ ಪ್ರಭಾವ ಹೊಂದಿರುತ್ತದಲ್ಲದೇ ಕೆಲವೊಮ್ಮೆ ಅವುಗಳ ಅಸ್ತಿತ್ವಕ್ಕೇ ಧಕ್ಕೆ ತರಬಹುದು. ಸಾಮಾನ್ಯವಾಗಿ ಯಾವುದೇ ವ್ಯಾಪಾರವು ತನ್ನ ಪ್ರಾರಂಭಿಕ ಹಂತದಲ್ಲಿ, ಭವಿಷ್ಯದಲ್ಲಿ ಅವು ತರಬಹುದಾದ ಸಂಭವನೀಯ ಲಾಭಗಳು ಮತ್ತು ನಷ್ಟಗಳ ಜೊತೆಗೆ ಸಂಭವನೀಯ ಗಂಡಾಂತರಗಳ ಕುರಿತು ವಿಶಾಲ ನಿರೀಕ್ಷೆಗಳನ್ನು ಹೊಂದಿರುತ್ತವೆ. ಇಂತಹ ಗಂಡಾಂತರಗಳು ಸಾಮಾನ್ಯವಾಗಿ ಅವುಗಳ ಕಾರ್ಯನಿರ್ವಹಣಾ ತಂತ್ರಗಳಲ್ಲಿ ಹುದುಗಿರುತ್ತವೆ. ಆದರೆ, ಎಷ್ಟೋ ಗಂಡಾಂತರಗಳು, ವಿಷಯಗಳು ಮತ್ತು ಸವಾಲುಗಳು ತಮ್ಮ ಶುದ್ಧ ಸಂಕೀರ್ಣತೆ ಮತ್ತು ಇಂತಹ ಚಟುವಟಿಕೆಗಳಿಗೆ ಇರಬಹುದಾದ ಅವಕಾಶಗಳಿಂದಾಗಿ ನೇರವಾಗಿ ವ್ಯಕ್ತವಾಗುವುದಿಲ್ಲ. ವಂಚನೆ ಅಂತಹ ಒಂದು ಚಟುವಟಿಕೆಯಾಗಿದ್ದು, ದೊಡ್ಡ ಸಂಖ್ಯೆಯ ಆರ್ಥಿಕ ಚಟುವಟಿಕೆಗಳನ್ನು ಆವರಿಸಿಕೊಂಡಿದೆ.
![impact-of-fraud-on-economic-fabric-ananth](https://etvbharatimages.akamaized.net/etvbharat/prod-images/5662875_thumhuubl.jpg)
ವಂಚನೆ ಮತ್ತು ವಂಚನಾ ಚಟುವಟಿಕೆಗಳನ್ನು ನಮ್ಮ ಕಾನೂನುಗಳು ನಿರ್ದಿಷ್ಟವಾಗಿ, ಹಲವಾರು ಸಲ ವ್ಯಾಖ್ಯಾನಿಸಿವೆ. ಆರ್ಥಿಕ ಅಪರಾಧಗಳ ಪೈಕಿ ವಂಚನೆ ಎಂಬುದು ಅತಿ ದೊಡ್ಡ ಹಾಗೂ ಅವಶ್ಯಕ ಭಾಗವೇ ಆಗಿದೆ. ವಂಚನೆಯ ಪ್ರಮುಖ ಸಮಸ್ಯೆ ಏನೆಂದರೆ, ಸಮಾಜದಲ್ಲಿ ಅಸ್ತಿತ್ವದಲ್ಲಿರುವ ವಿಶ್ವಾಸವನ್ನೇ ಅದು ಕುಂದಿಸಿಬಿಡುತ್ತದೆ. ವ್ಯಾಪಾರ ಚಟುವಟಿಕೆಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ ಖಾಸಗಿ ಸಂಸ್ಥೆಗಳು ಮತ್ತು ಸರಕಾರಗಳ ಪಾಲಿಗೆ ಈ ವಿಶ್ವಾಸ ಎಂಬುದು ಅವಿಭಾಜ್ಯ ಅಂಗ.
ವಿವಿಧ ರೀತಿಯ ವಂಚನೆಗಳಿಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯಲ್ಲಿ (ಐಪಿಸಿ) ವಿವಿಧ ವಿಭಾಗಗಳಿವೆ. ʼವಂಚನೆʼ ಎಂದು ವರ್ಗೀಕರಿಸಲಾದ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಭಾರತದ ನ್ಯಾಯಾಲಯಗಳು ಸುದೀರ್ಘ ಕಾಲದಿಂದ ವಿವಿಧ ರೀತಿಯ ತೀರ್ಪುಗಳನ್ನು ನೀಡುತ್ತಲೇ ಬಂದಿವೆ. ವಂಚನೆಯ ಪ್ರಮುಖ ಅಂಶವೆಂದರೆ, ಚರ ಅಥವಾ ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಇನ್ನೊಬ್ಬ ವ್ಯಕ್ತಿಯನ್ನು ಉದ್ದೇಶಪೂರ್ವಕವಾಗಿ ವಂಚಿಸುವುದು. ವಂಚನೆಯಲ್ಲಿ ಎರಡು ವಿಧಗಳನ್ನು ನ್ಯಾಯಾಲಯಗಳು ಗುರುತಿಸಿವೆ: ಮೋಸ ಹಾಗೂ ಗಾಯಗೊಳಿಸುವುದು. ಸುಳ್ಳು ಹೇಳಿಕೆಯನ್ನು, ಅದು ಸರಿ ಅಥವಾ ತಪ್ಪು ಎಂಬುದನ್ನು ಗಮನಿಸದೇ (೧) ಉದ್ದೇಶಪೂರ್ವಕವಾಗಿ ಅಥವಾ (೨) ಅದರ ಸತ್ಯ ಕುರಿತು ನಂಬಿಕೆಯಿಲ್ಲದೇ ಅಥವಾ (೩) ಬೇಕಾಬಿಟ್ಟಿಯಾಗಿ, ನಿರ್ಲಕ್ಷ್ಯದಿಂದ ಮಾಡುವುದು. ಮುಖ್ಯವಾದ ಅಂಶವೆಂದರೆ, ವಂಚನೆ ಮತ್ತು ನ್ಯಾಯ ಎಂದಿಗೂ ಜೊತೆಯಾಗಿ ಇರಲು ಸಾಧ್ಯವಿಲ್ಲ. ಏಕೆಂದರೆ, ವಂಚನೆ ಎಂಬುದು ಉದ್ದೇಶಪೂರ್ವಕವಾದ ಮೋಸವಾಗಿದ್ದು, ಇನ್ನೊಬ್ಬ ವ್ಯಕ್ತಿಯನ್ನು ದುರ್ಬಳಕೆ ಮಾಡಿಕೊಳ್ಳುವ ಮೂಲಕ ಏನಾದರೂ ಗಳಿಸಲಿಕ್ಕೆ ಮಾಡಿದ ತಂತ್ರವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇನ್ನೊಬ್ಬನಿಗೆ ನಷ್ಟ ಉಂಟು ಮಾಡಿ ಲಾಭ ಗಳಿಸುವ ಮೋಸದ ಕೃತ್ಯ ಅದು. ಹೀಗೆ, ಅದು ಎರಡು ಅಂಶಗಳನ್ನು ಹೊಂದಿರುತ್ತದೆ: ಲಾಭವನ್ನು ಹೊಂದುವ ಉದ್ದೇಶ ಅಥವಾ ಅನುಕೂಲ ಸಾಧಿಸಿಕೊಳ್ಳುವುದು ಒಂದೆಡೆಯಾದರೆ, ನಷ್ಟ ಉಂಟು ಮಾಡುವುದು ಇನ್ನೊಂದೆಡೆ.
ದೇಶದಲ್ಲಿ ಎಷ್ಟು ರೀತಿಯ ಮತ್ತು ಸಂಖ್ಯೆಯ ವಂಚನೆಗಳಿವೆ ಎಂಬುದನ್ನು ನಿರ್ದಿಷ್ಟವಾಗಿ ಹಾಗೂ ನಿಖರವಾಗಿ ಹೇಳುವುದು ಕಷ್ಟ. ಸಾಮಾನ್ಯವಾಗಿ, ವಿವಿಧ ರೀತಿಯ ವಂಚನೆ ಪ್ರರಣಗಳೊಂದಿಗೆ ವ್ಯವಹರಿಸುವುದು ನ್ಯಾಯಾಲಯಗಳ ಕೆಲಸ. ಸಾಕಷ್ಟು ವಿಸ್ತೃತವಾದ ಮೋಸ, ಇನ್ನೊಬ್ಬರ ಆಸ್ತಿಯನ್ನು ದುರ್ಮಾರ್ಗದ ದಾರಿಗಳಿಂದ ಲಪಟಾಯಿಸಿದ್ದು, ನಕಲಿ ದಾಖಲೆಗಳ ಸೃಷ್ಟಿ, ಪಿರಾಮಿಡ್ ಯೋಜನೆಗಳು, ಗ್ರಾಹಕರ ವಂಚನೆ, ವಂಚನೆ ಮಾರಾಟದಂತಹ ನಾನಾ ರೀತಿಯ ವಂಚನೆಗಳನ್ನು ಅದು ಒಳಗೊಂಡಿದೆ.
ವ್ಯಾಪಾರ ಮತ್ತು ಆರ್ಥಿಕತೆಯ ಮೇಲೆ ವಂಚನೆಯ ಪ್ರಭಾವ
ಭಾರತದ ಆರ್ಥಿಕತೆಯ ಬೆಳವಣಿಗೆ ಕೇವಲ ಆರ್ಥಿಕ ಅವಕಾಶಗಳ ಸ್ಫೋಟವನ್ನಷ್ಟೇ ಅಲ್ಲ, ವಿವಿಧ ರೀತಿಯ ವಂಚನೆಗಳಲ್ಲಿಯೂ (ಕೇವಲ ಭ್ರಷ್ಟಾಚಾರ ಮತ್ತು ಕಪ್ಪು ಹಣಕ್ಕೆ ಮಾತ್ರ ಸಂಬಂಧಿಸಿದ್ದಲ್ಲ) ತೀವ್ರ ಏರಿಕೆಯನ್ನೂ ತಂದಿದೆ. ವ್ಯಂಗ್ಯದ ಸಂಗತಿ ಏನೆಂದರೆ, ತಂತ್ರಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳು ವಂಚನೆಯ ಏರಿಕೆಗೂ ಕಾರಣವಾಗಿರುವುದು.
ವಂಚನೆ ಮತ್ತು ಅದು ಸೃಷ್ಟಿಸುವ ಗಂಡಾಂತರಗಳು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಜಗತ್ತಿನಾದ್ಯಂತ ವ್ಯಾಪಾರದ ಮೇಲೆ ಪರಿಣಾಮ ಬೀರುತ್ತದೆ. ವಂಚನೆಯ ಮೇಲೆ ನಡೆಸಿರುವ ನಾನಾ ಅಧ್ಯಯನಗಳು ಜಾಗತಿಕ ವ್ಯಾಪಾರ ವಂಚನೆ ಮತ್ತು ವಂಚನೆಯೊಂದಿಗೆ ಸೇರಿಕೊಂಡಿರುವ ಗಂಡಾಂತರಗಳ ಕುರಿತು ಆಸಕ್ತಿಕರ ಒಳದೃಷ್ಟಿಯನ್ನು ಒದಗಿಸಿವೆ.
ಕಳೆದ ವರ್ಷದಲ್ಲಿ ಇದ್ದಂತಹವೇ ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯ ವಂಚನೆಗಳನ್ನು ಎದುರಿಸಿದ್ದಾಗಿ ಕಳೆದ ವರ್ಷದ ಜಾಗತಿಕವಾಗಿ ಬಹುತೇಕ ೬೨% ವಹಿವಾಟುಗಳು ಹೇಳಿಕೊಂಡಿವೆ. ಭಾರತಕ್ಕೆ ಸಂಬಂಧಿಸಿದಂತೆ ಮೂರನೇ ಒಂದು ಭಾಗದಷ್ಟು ವಹಿವಾಟುಗಳು ಆಂತರಿಕ ಅಥವಾ ಬಾಹ್ಯ ವಂಚನೆಗಳಿಂದಾಗಿ ತೊಂದರೆ ಅನುಭವಿಸಿವೆ. ಕೆಲ ರೀತಿಯ ವಂಚನೆ ಅಥವಾ ಆರ್ಥಿಕ ಅಪರಾಧಗಳಿಂದಾಗಿ ತಮ್ಮ ಕಂಪನಿಗಳು ತೊಂದರೆ ಎದುರಿಸಬೇಕಾಯಿತು ಎಂದು ೨೦೧೮ರಲ್ಲಿ ಶೇಕಡಾ ೪೯ರಷ್ಟು ಜನ ಅಭಿಪ್ರಾಯ ವ್ಯಕ್ತಪಡಿಸಿದ್ದು, ೨೦೧೬ರಲ್ಲಿ ಈ ಪ್ರಮಾಣ ಶೇಕಡಾ ೩೬ರಷ್ಟಿತ್ತು ಎಂಬುದನ್ನು ಇತ್ತೀಚಿನ ಸಮೀಕ್ಷೆಯೊಂದು ಬೊಟ್ಟು ಮಾಡಿ ತೋರಿಸಿದೆ.
ವಂಚನೆ ವಿಧಾನಗಳ ಶುದ್ಧ ಸಂಕೀರ್ಣತೆ ಮತ್ತು ಮಾದರಿಗಳು ಪ್ರತಿ ವರ್ಷ ಯಾವ ಪ್ರಮಾಣದಲ್ಲಿ ಏರಿಕೆಯಾಗುತ್ತಿವೆಯೆಂದರೆ, ತಮ್ಮನ್ನು ಮತ್ತು ತಮ್ಮ ಗ್ರಾಹಕರನ್ನು ವಂಚನೆಯಿಂದ ರಕ್ಷಿಸಿಕೊಳ್ಳುವ ವಿಶ್ವಾಸ ಈಗ ಕೆಲವೇ ಉದ್ಯಮಿಗಳಲ್ಲಿ ಮಾತ್ರ ಉಳಿದಿದೆ. ಇದರ ಪರಿಣಾಮವಾಗಿ, ವಂಚನೆ ಸಾಧ್ಯತೆ ಪ್ರಮಾಣವನ್ನು ತಗ್ಗಿಸಲು ಕೈಗೊಳ್ಳಬೇಕಾದ ಕ್ರಮಗಳಿಗೆ ಕಂಪನಿಗಳು ಹೆಚ್ಚು ಹಣ ಹೂಡುವ ಒತ್ತಡಕ್ಕೆ ಸಿಲುಕಿದ್ದು, ಇದು ಅವುಗಳ ಬಂಡವಾಳ ಹೂಡಿಕೆಗಳ ಮೇಲೆ ಏಟು ಕೊಡುತ್ತಿದೆ.
ವಂಚನೆಯ ಒಂದು ಪ್ರಮುಖ ಹಾಗೂ ಸಮಸ್ಯಾತ್ಮಕ ಅಂಶ ಏನೆಂದರೆ, ಇತ್ತೀಚಿನ ದಿನಗಳಲ್ಲಿ ವಂಚನೆ ಮತ್ತು ಆರ್ಥಿಕ ಅಪರಾಧಗಳು ಸಂಸ್ಥೆಯ ಒಳಗಿನ ಕುತಂತ್ರಿಗಳು ಅಥವಾ ಪರಸ್ಪರ ಚೆನ್ನಾಗಿ ಪರಿಚಯ ಇರುವವರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಸಂಭವಿಸುತ್ತಿರುವುದು. ವಾಣಿಜ್ಯದ ಅತಿ ದೊಡ್ಡ ಗಂಡಾಂತರಗಳಲ್ಲಿ ಆಂತರಿಕ ಮಾಹಿತಿಯ ಸೋರಿಕೆ (ಶೇ. ೩೯), ದತ್ತಾಂಶ ಕಳವು (ಶೇ. ೨೮), ಮೂರನೇ ಪಕ್ಷಗಾರರಿಂದಾಗುವ ಪ್ರತಿಷ್ಠೆ ನಾಶ (ಶೇ. ೨೯), ಬಾಹ್ಯ ವ್ಯಕ್ತಿಗಳಿಂದ ವಂಚನೆ (ಶೇ. ೨೮), ಆಂತರಿಕ ವ್ಯಕ್ತಿಗಳಿಂದ ವಂಚನೆ (ಶೇ. ೨೭), ಬೌದ್ಧಿಕ ಹಕ್ಕುಗಳ ಕಳವು (ಶೇ. ೨೪), ನಕಲು ಮಾಡುವುದು (ಶೇ. ೧೭), ಕಪ್ಪು ಹಣ ಬಿಳಿಯಾಗಿಸುವುದು (ಶೇ. ೧೬) ಸೇರಿವೆ ಎಂಬುದನ್ನು ಇತ್ತೀಚಿನ ಜಾಗತಿಕ ಸಮೀಕ್ಷೆಯೊಂದು ಬೊಟ್ಟು ಮಾಡಿ ತೋರಿಸಿದೆ.
ಭಾರತದಲ್ಲಿ ಕೂಡಾ ಇದು ತೀರಾ ಭಿನ್ನವಾಗೇನೂ ಇಲ್ಲ. ಬಹುತೇಕ ಪ್ರಕರಣಗಳಲ್ಲಿ (ಶೇ. ೪೫) ಆಂತರಿಕ ವಂಚನೆಯಿಂದಾಗಿ ವ್ಯಾಪಾರದ ಮೇಲೆ ಪರಿಣಾಮ ಆಗುವಲ್ಲಿ ಉದ್ಯೋಗಿಗಳ ಪಾತ್ರವೇ ಪ್ರಮುಖವಾಗಿದ್ದರೆ, ಶೇ. ೨೯ರಷ್ಟು ಪರಿಣಾಮ ಸಂಬಂಧಿಸಿದ ವ್ಯಕ್ತಿಗಳು ಅಥವಾ ಮೂರನೇ ಪಕ್ಷಗಾರರಿಂದ ಆಗಿದೆ. ಕೇವಲ ಶೇ. ೩ರಷ್ಟು ಆಂತರಿಕ ವಂಚನೆಗಳು ಹಾಗೂ ಶೇ. ೭ರಷ್ಟು ಬಾಹ್ಯ ವಂಚನೆಗಳು ಮಾತ್ರ ಗೊತ್ತಿರದ ಅಥವಾ ಬಿಡಿ ವ್ಯಕ್ತಿಗಳಿಂದಾಗಿ ಆಗಿವೆ. ಇನ್ನೊಂದು ಸಮಸ್ಯಾತ್ಮಕ ಅಂಶವೇನೆಂದರೆ, ಕಂಪನಿಯ ವಂಚನೆಗಳ ಹೆಚ್ಚಳಕ್ಕೆ ಹಿರಿಯ ಮ್ಯಾನೇಜರ್‌ಗಳೇ ಕಾರಣವಾಗುತ್ತಿರುವುದು. ೨೦೧೬ರಲ್ಲಿ ಶೇ. ೧೬ರಷ್ಟಿದ್ದ ಇಂತಹ ಪ್ರಕರಣಗಳು ೨೦೧೮ರಲ್ಲಿ ಶೇ. ೨೪ಕ್ಕೆ ಏರಿಕೆಯಾಗಿವೆ.
ಕುತೂಹಲಕರ ಹಾಗೂ ಸಾಮಾನ್ಯ ಸಂಗತಿ ಏನೆಂದರೆ, ಜಾಗತಿಕವಾಗಿ ವಂಚನೆ ಪ್ರಕರಣಗಳು ಕಂಪನಿಗಳ ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಹೆಚ್ಚು ಪ್ರಮಾಣದಲ್ಲಿ ಬಯಲಾಗಿದ್ದರೆ ಮತ್ತು ಕೆಲವು ಪ್ರಕರಣಗಳಲ್ಲಿ ಮಾತ್ರ ಬಾಹ್ಯ ಲೆಕ್ಕ ಪರಿಶೋಧನೆಯಲ್ಲಿ ಬಯಲಾಗಿವೆ. ನಿಯಂತ್ರಕರು ಅಥವಾ ಕಾನೂನು ಪ್ರಾಧಿಕಾರಗಳಿಂದ ವಂಚನೆ ಪ್ರಕರಣಗಳು ಬಯಲಾಗುವ ಪ್ರಮಾಣ ಬಹಳಷ್ಟು ಸಲ ಶೇ. ೫ರಿಂದ (ಆಂತರಿಕ ಪಕ್ಷಗಾರರಿಂದ ಉಂಟಾಗುವ ವಂಚನೆ ಪ್ರಕರಣಗಳಿಗೆ ಸಂಬಂಧಿಸಿದಂತೆ) ಶೇ. ೨೧ರಷ್ಟು (ನಕಲು ಮಾಡುವ ಪ್ರಕರಣಗಳಿಗೆ ಸಂಬಂಧಿಸಿದಂತೆ) ವ್ಯತ್ಯಾಸವಾಗಿದೆ.
ತಂತ್ರಜ್ಞಾನದ ಪ್ರಭಾವ ಮತ್ತು ಅದು ತಂದೊಡ್ಡುತ್ತಿರುವ ಸಂಕೀರ್ಣತೆಗಳನ್ನು ನಾವು ಈ ಹಿನ್ನೆಲೆಯಲ್ಲಿ ಅರ್ಥ ಮಾಡಿಕೊಳ್ಳಬೇಕಿದೆ. ಸಂಪರ್ಕವೂ ಸೇರಿದಂತೆ ತಂತ್ರಜ್ಞಾನದ ಮುನ್ನಡೆಯಿಂದಾಗಿ ವಂಚನೆ ಮತ್ತು ಸಂಬಂಧಿತ ಗಂಡಾಂತರಗಳೂ ಹೆಚ್ಚಳವಾಗಿವೆ. ಸೈಬರ್ ಭದ್ರತೆ, ದತ್ತಾಂಶ ಕಳವು ಮತ್ತು ಬೌದ್ಧಿಕ ಹಕ್ಕು ಕಳವು ಮುಂತಾದವು ವಂಚನೆ ಮತ್ತು ಸಂಬಂಧಿತ ಆರ್ಥಿಕ ಅಪರಾಧಗಳ ಪ್ರಮುಖ ಭಾಗವಾಗಿರುವುದರಲ್ಲಿ ಅಚ್ಚರಿಯೇನೂ ಇಲ್ಲ. ದತ್ತಾಂಶ ಕಳವು ಮತ್ತು ಆಂತರಿಕ ಮಾಹಿತಿ ಸೋರಿಕೆಗಳು ಈಗ ಪ್ರಮುಖ ಗಂಡಾಂತರದ ಹಾಗೂ ವಂಚನಾತ್ಮಕ ಚಟುವಟಿಕೆಗಳ ವಿಷಯಗಳಾಗಿದ್ದು, ವ್ಯಾಪಾರ ರಂಗ ಇದನ್ನು ಆದ್ಯತೆಯ ಮೇರೆಗೆ ಪರಿಗಣಿಸಬೇಕಾಗಿದೆ. ಇವು ತಂದೊಡ್ಡಿರುವ ಬೆದರಿಕೆಗಳ ಹಿನ್ನೆಲೆಯಲ್ಲಿ, ವಂಚನೆ ಮತ್ತು ಸಂಬಂಧಿತ ಆರ್ಥಿಕ ಅಪರಾಧಗಳು ಸಂಭವಿಸುವುದರಿಂದ ಉಂಟಾಗುವ ನಷ್ಟಗಳು ಮತ್ತು ಸಮಸ್ಯೆಗಳ ಪರಿಣಾಮಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.
ಈ ನಷ್ಟಗಳ ಪರಿಣಾಮಗಳನ್ನು ನಿರ್ದಿಷ್ಟವಾಗಿ ಅಳೆಯುವುದು ಬಹಳ ಕಷ್ಟ ಎಂಬುದಕ್ಕೆ ಒಂದು ಸರಳ ಕಾರಣ ಏನೆಂದರೆ, ಈ ಪೈಕಿ ಕೆಲವನ್ನು ಪತ್ತೆ ಹಚ್ಚುವುದು ಅಸಂಭವ ಮತ್ತು ಒಂದು ವೇಳೆ ಪತ್ತೆಯಾದರೂ ವಂಚನೆಯಿಂದ ಸಂತ್ರಸ್ತರಾದವರ ಪೈಕಿ ಅನೇಕರು ತಮ್ಮ ಪ್ರತಿಷ್ಠೆಯ ಮೇಲೆ ಇದು ಉಂಟು ಮಾಡಬಹುದಾದ ಪರಿಣಾಮಗಳನ್ನು ಎದುರಿಸಲು ಮನಸ್ಸು ಮಾಡದ್ದರಿಂದ, ಈ ನಷ್ಟಗಳ ಕುರಿತಂತೆ ಯಾವುದೇ ಮಾಹಿತಿಯನ್ನೂ ಅವರು ಬಹಿರಂಗಪಡಿಸುವುದಿಲ್ಲ. ಆದರೆ, ಅಮೆರಿಕದಂತಹ ದೇಶಗಳಲ್ಲಿ ಪರಿಸ್ಥಿತಿ ಹೀಗಿಲ್ಲ. ಅಲ್ಲಿಯ ಕೇಂದ್ರ ಸರಕಾರದ ಕೇಂದ್ರ ವಾಣಿಜ್ಯ ಆಯೋಗದಂತಹ (ಫೆಡರಲ್ ಟ್ರೇಡ್ ಕಮೀಶನ್ – ಎಫ್‌ಟಿಸಿ) ಸಂಸ್ಥೆಗಳು, ಪ್ರತೀ ಕೆಲವು ವರ್ಷಕ್ಕೊಮ್ಮೆ, ವಂಚನೆಗೆ ಈಡಾದ ಸಂತ್ರಸ್ತರ ಲೆಕ್ಕವನ್ನು ಹಾಕುತ್ತವೆ. ಆ ಪ್ರಕಾರ, ಪ್ರತಿ ವರ್ಷ ೪ ಕೋಟಿ ಅಮೆರಿಕನ್ನರು ಅಥವಾ ದೇಶದ ಶೇ. ೧೬ರಷ್ಟು ಜನ ವಿವಿಧ ರೀತಿಯ ಆರ್ಥಿಕ ವಂಚನೆಗೆ ಈಡಾಗುತ್ತಾರೆ ಎಂದು ಎಫ್‌ಟಿಜಿ ಅಂದಾಜಿಸಿದೆ.
ಭಾರತದಲ್ಲಿ ವಿವಿಧ ರೀತಿಯ ವಂಚನೆಗಳಿಂದ ಅತಿ ಹೆಚ್ಚು ನಷ್ಟ ಅನುಭವಿಸುತ್ತಿರುವವರ ಪೈಕಿ ಬ್ಯಾಂಕ್‌ಗಳು ದೊಡ್ಡ ಸಂಖ್ಯೆಯಲ್ಲಿವೆ. ಕಳೆದ ಹಣಕಾಸು ವರ್ಷವೊಂದರಲ್ಲಿಯೇ, ಬ್ಯಾಂಕುಗಳಿಗೆ ಸಂಬಂಧಿಸಿದ ವಂಚನೆಗಳಿಂದಾಗಿ ರೂ.೭೧,೫೦೦ ಕೋಟಿ ನಷ್ಟವಾಗಿದೆ. ೨೦೧೮-೧೯ನೇ ಹಣಕಾಸು ವರ್ಷದಲ್ಲಿ ೩೭೬೬ ವಂಚನೆ ಪ್ರಕರಣಗಳು ದಾಖಲಾಗಿದ್ದು- ಶೇ. ೧೫ರಷ್ಟು ಏರಿಕೆಯಾಗಿದೆ. ಇದಲ್ಲದೇ, ಕಳೆದ ಐದು ವರ್ಷಗಳ ಪಿರಾಮಿಡ್ ಮತ್ತು ಅಕ್ರಮ ಠೇವಣಿ ಯೋಜನೆಗಳಲ್ಲಿ ಹೂಡಿಕೆದಾರರಿಗೆ ರೂ.೧.೨ ಲಕ್ಷ ಕೋಟಿ ವಂಚನೆಯಾಗಿದ್ದನ್ನು ಸಿಬಿಐ ವಿಚಾರಣೆ ಪತ್ತೆ ಮಾಡಿದೆ. ಅಲ್ಲದೇ, ಜಿಎಸ್‌ಟಿ ವಂಚನೆಗೆ ಸಂಬಂಧಿಸಿದ ಅಸಂಖ್ಯಾತ ಪ್ರಕರಣಗಳಲ್ಲಿ, ಅಂದಾಜು ರೂ.೪೫,೦೦೦ ಕೋಟಿ ವಂಚನೆಯಾಗಿದ್ದಾಗಿ ಅಂದಾಜಿಸಲಾಗಿದೆ. ಸ್ಥಿರ ಮತ್ತು ಚರ ಆಸ್ತಿಗಳು, ಒಪ್ಪಂದ, ದಾಖಲೆ ಮತ್ತು ಲೆಕ್ಕಪತ್ರ ವಿಷಯಗಳಿಗೆ ಸಂಬಂಧಿಸಿದ ವಂಚನೆ ಪ್ರಕರಣಗಳಲ್ಲಿ ಸಂತ್ರಸ್ತರಾದವರನ್ನು ಹೊರತುಪಡಿಸಿ ನಡೆದ ಹಣಕಾಸು ಅಕ್ರಮಗಳಿವು. ಇಂತಹ ಕೃತ್ಯಗಳಿಗೆ ಸಂಬಂಧಿಸಿದ ವ್ಯಾಜ್ಯಗಳು, ನ್ಯಾಯಾಲಯದ ಪ್ರಕರಣಗಳು ಮತ್ತು ಪೊಲೀಸ್ ದೂರುಗಳು ಪ್ರತಿ ದಿನ ಏರಿಕೆಯಾಗುತ್ತಿವೆ. ನ್ಯಾಯಾಂಗ ಮತ್ತು ಆಡಳಿತ ವ್ಯವಸ್ಥೆಯನ್ನು ಇದು ಉಸಿರುಗಟ್ಟಿಸತೊಡಗಿದ್ದು, ಸರಕಾರ ಎಚ್ಚೆತ್ತುಕೊಳ್ಳಲು ಈಗ ಸಾಕಷ್ಟು ಕಾರಣಗಳು ದೊರೆತಂತಾಗಿದೆ.
ವಂಚನೆಯ ವಿರುದ್ಧ ಹೋರಾಟ
ವಂಚನೆ ಎಂಬುದು ಸುಲಭವಾಗಿ ಎದುರಿಸುವಂಥದ್ದೇನಲ್ಲ. ಬದ್ಧತೆ ಹಾಗೂ ಶೈಕ್ಷಣಿಕ ಮಟ್ಟಗಳನ್ನೂ ಇದು ದೊಡ್ಡ ಪ್ರಮಾಣದಲ್ಲಿ ಅವಲಂಬಿಸಿದೆ. ಅದಾಗ್ಯೂ, ಬಹುತೇಕ ಪ್ರಕರಣಗಳಲ್ಲಿ, ಸಂತ್ರಸ್ತರು ಕನಿಷ್ಠ ಮುನ್ನೆಚ್ಚರಿಕೆಗಳನ್ನೂ ತೆಗೆದುಕೊಂಡಿರದ ಕಾರಣ ವಂಚನೆ ಸಂಭವಿಸುತ್ತಿದೆ. ಯಾವುದೇ ವಹಿವಾಟಿನಲ್ಲಿ ತೊಡಗಿಕೊಳ್ಳುವ ಮುನ್ನ, ಜನರು ನೆನಪಿಟ್ಟುಕೊಳ್ಳಬೇಕಾದ ಪ್ರಮುಖ ಹಾಗೂ ಮೂಲಭೂತ ಕಾನೂನು ಸೂತ್ರವೇನೆಂದರೆ: “ತನ್ನ ಹತ್ತಿರ ಇರದ ಯಾವುದನ್ನೂ ಯಾರೂ ಕೊಡಲು ಸಾಧ್ಯವಿಲ್ಲ” ಎಂಬುದು (ಲ್ಯಾಟಿನ್‌ನಲ್ಲಿ ಇದನ್ನೇ nemo dat qui not habet ಎನ್ನುತ್ತಾರೆ). ಸೂಕ್ತ ಹಾಗೂ ಸಾಕಷ್ಟು ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಬೇಕೆಂಬುದೇ ಇದರ ಅರ್ಥ.
ಏಕೆಂದರೆ, ವಂಚನೆಯ ದೊಡ್ಡ ಭಾಗ ಸಂಭವಿಸುವುದೇ ಸಂಸ್ಥೆಯ ಒಳಗಿರುವವರಿಂದ. ಆದ್ದರಿಂದ, ವ್ಯಾಪಾರದಲ್ಲಿ ತಕ್ಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಜಾಣ್ಮೆಯ ನಡೆ. ಯಾವುದೇ ವಹಿವಾಟಿನಲ್ಲಿ ಹೇಳಿಕೊಳ್ಳಲಾದ ಪ್ರತಿಯೊಂದನ್ನೂ ಪ್ರತಿಯೊಬ್ಬರೂ ಪರಿಶೀಲಿಸಿ ದೃಢಪಡಿಸಿಕೊಳ್ಳುವುದು ಉತ್ತಮ ಎಂಬುದು ಇದರಿಂದ ಸ್ಪಷ್ಟ. ಇನ್ನೊಂದು ಪಕ್ಷದ ಉದ್ದೇಶ ಏನು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ನಂತರದ ಪ್ರಮುಖ ನಡೆ.
ಇತರ ದೇಶಗಳಲ್ಲಿರುವಂತೆ ವಿಧಿವಿಜ್ಞಾನ ಲೆಕ್ಕ ಪರಿಶೋಧನೆ ಅಥವಾ ವಂಚನೆ ಪತ್ತೆ ಹಚ್ಚುವಲ್ಲಿ ತರಬೇತಿ ಪಡೆದಿರುವ ವಿಶೇಷ ವರ್ಗದ ವ್ಯಕ್ತಿಗಳನ್ನು ದೃಢೀಕೃತ ವಂಚನಾ ಪರೀಕ್ಷಕರೆಂದು ಪರಿಗಣಿಸಿ ಅವರ ಸೇವೆ ಪಡೆದುಕೊಳ್ಳುವುದಕ್ಕೆ ಭಾರತ ಇದುವರೆಗೂ ಅಷ್ಟೊಂದು ಒತ್ತು ಕೊಟ್ಟಿಲ್ಲ. ಈ ಪರಿಸ್ಥಿತಿ ಬದಲಾಗಬೇಕೆಂದರೆ, ವಿಧಿವಿಜ್ಞಾನ ಲೆಕ್ಕ ಪರಿಶೋಧನೆ ಮತ್ತು ವಂಚನೆ ಅಧ್ಯಯನಗಳಿಗೆ ಸಂಬಂಧಿಸಿದ ಪ್ರಮುಖ ವಿಷಯಗಳನ್ನು ಭಾರತೀಯ ವಿಶ್ವವಿದ್ಯಾಲಯ ವ್ಯವಸ್ಥೆ ಅಳವಡಿಸಿಕೊಳ್ಳುವ ಅವಶ್ಯಕತೆಯಿದೆ.
ಸರಕಾರ ಪರಿಗಣಿಸಬೇಕಾದ ಒಂದು ಅವಶ್ಯಕ ಪ್ರಮುಖ ಬದಲಾವಣೆ ಎಂದರೆ ವಂಚನೆ ಮತ್ತು ಸಂಬಂಧಿತ ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳ ಕುರಿತಂತೆ ನ್ಯಾಯಾಂಗ ರಚನೆಯಲ್ಲಿ ಸೂಕ್ತ ಸುಧಾರಣೆಗಳನ್ನು ತರುವುದು. ಸದ್ಯದ ಪರಿಸ್ಥಿತಿಯಲ್ಲಿ ನ್ಯಾಯಾಂಗ ವ್ಯವಸ್ಥೆ ದೊಡ್ಡ ಒತ್ತಡದಲ್ಲಿ ಸಿಲುಕಿದೆ. ಆದ್ದರಿಂದ, ಪರ್ಯಾಯ ವ್ಯಾಜ್ಯ ಇತ್ಯರ್ಥ ಹಾಗೂ ಮಧ್ಯಸ್ಥಿಕೆ ಕ್ರಮಗಳನ್ನು ಬೆಂಬಲಿಸುವ ಜೊತೆಜೊತೆಗೇ ಈಗಾಗಲೇ ಇರುವ ದಿವಾಳಿತನ ಮತ್ತು ಕಾನೂನಾತ್ಮಕವಾಗಿ ದಿವಾಳಿತನ ಇತ್ಯರ್ಥ ಸಂಹಿತೆಯಂತಹ (ಇನ್‌ಸಾಲ್ವೆನ್ಸಿ ಅಂಡ್ ಬ್ಯಾಂಕ್‌ರಪ್ಟಸಿ – ಐಬಿಸಿ) ಗರಿಷ್ಠ ಕಾಲಾವಧಿ ಮಿತಿಯನ್ನು ಒಳಗೊಂಡ ಹಾಗೂ ನ್ಯಾಯಬದ್ಧ ಕಾನೂನುಗಳಡಿ ಕಡ್ಡಾಯವಾಗಿ ಕೆಲಸ ಮಾಡಬೇಕಾದ ವಿಶೇಷ ನ್ಯಾಯಾಲಯ ಸ್ಥಾಪನೆಯಂತಹ ಪರ್ಯಾಯ ಮಾರ್ಗಗಳನ್ನೂ ಸರಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ನ್ಯಾಯದಾನ ಹಾಗೂ ವ್ಯಾಜ್ಯ ಇತ್ಯರ್ಥಗಳನ್ನು ತುರ್ತಾಗಿ ಇತ್ಯರ್ಥಪಡಿಸಿದ್ದೇ ಆದಲ್ಲಿ ವಂಚನೆ ಮತ್ತು ಆರ್ಥಿಕ ಅಪರಾಧಗಳ ವಿರುದ್ಧ ಅದು ಬಲವಾದ ಪ್ರತಿರೋಧಕ ಅಂಶವಾಗಿ ಕೆಲಸ ಮಾಡಲಿದೆ. ಯಾವುದೇ ಕೆಟ್ಟ ನಡವಳಿಕೆ ತಕ್ಷಣ ದಂಡಿಸಲ್ಪಡುವುದರಿಂದ ವ್ಯವಸ್ಥೆಯ ಮೇಲೆ ವಿಶ್ವಾಸ ಹೆಚ್ಚುತ್ತದೆ ಹಾಗೂ ಪ್ರತಿವಾದಿಗಳ ಮೇಲೆ ಹೆಚ್ಚುವರಿ ನಂಬಿಕೆಯನ್ನು ಮೂಡಿಸುವ ಮೂಲಕ ಭಾರತೀಯ ಆರ್ಥಿಕತೆಯ ಮೇಲೆ ಗಣನೀಯ ನೆರವು ನೀಡಲು ಸಾಧ್ಯವಾಗುತ್ತದೆ.
ಆರ್ಥಿಕತೆಯ ನೆಲೆಗಟ್ಟಿನ ಮೇಲೆ ವಂಚನೆಯ ಪ್ರಭಾವ
ಡಾ. ಎಸ್. ಅನಂತ