ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಱಲಿ ವೇಳೆ ನಡೆದ ಹಿಂಸಾಚಾರದಲ್ಲಿ ಸಾಕಷ್ಟು ಮಂದಿ ಪೊಲೀಸರು ಗಾಯಗೊಂಡಿದ್ದರು. ಇದೇ ಸಮಯದಲ್ಲಿ ಪ್ರತಿಭಟನಾಕಾರನೋರ್ವ ಪೊಲೀಸ್ ಮೇಲೆ ಖಡ್ಗ ಬೀಸುತ್ತಿರುವ ಫೋಟೋ ಕೂಡಾ ವೈರಲ್ ಆಗಿದ್ದು, ಕಾನ್ಸ್ಟೇಬಲ್ ಪ್ರಾಣಾಪಾಯದಿಂದ ಪಾರಾಗಿದ್ದರು.
ದೆಹಲಿಯ ಮಂಡವಾಲಿ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ದಯಾಚಂದ್ ಪ್ರಾಣಾಪಾಯದಿಂದ ಪಾರಾಗಿದ್ದ ಸಿಬ್ಬಂದಿಯಾಗಿದ್ದು, ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಕರ್ತವ್ಯದಲ್ಲಿದ್ದರು. ಟ್ರ್ಯಾಕ್ಟರ್ ಪರೇಡ್ಗೆ ಅವಕಾಶ ಕೊಡದ ಕಾರಣದಿಂದ ಸಾವಿರಾರು ಮಂದಿ ಪ್ರತಿಭಟನಾಕಾರರು ಪೊಲೀಸರ ಮೇಲೆ ದಾಳಿ ನಡೆಸಿದ್ದರು.
ಇದೇ ವೇಳೆ ಟರ್ಬನ್ ಧರಿಸಿ, ಖಡ್ಗಧಾರಿಯಾಗಿ ಬಂದಿದ್ದ ವೃದ್ಧ ಪ್ರತಿಭಟನಾಕಾರನೋರ್ವ ಸಬ್ ಇನ್ಸ್ಪೆಕ್ಟರ್ ದಯಾಚಂದ್ ಮೇಲೆ ಖಡ್ಗದಿಂದ ದಾಳಿ ನಡೆಸಲು ಮುಂದಾಗಿದ್ದಾನೆ. ಆಗ ದಯಾಚಂದ್ ಪಕ್ಕದಲ್ಲಿದ್ದ ಕಾನ್ಸ್ಟೇಬಲ್ ನಿತಿನ್ ಅವರು ಸಬ್ ಇನ್ಸ್ಪೆಕ್ಟರ್ನನ್ನು ಕಾಪಾಡಿದ್ದಾರೆ.
ಇದನ್ನೂ ಓದಿ: ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ನೀಡಬಾರದಿತ್ತು: ಜಿ.ಕೆ.ಪಿಳ್ಳೈ
'ಅದು ತುಂಬಾ ಭಯಾನಕವಾಗಿತ್ತು. ಸಬ್ ಇನ್ಸ್ಪೆಕ್ಟರ್ ಮೇಲೆ ಖಡ್ಗದಿಂದ ದಾಳಿ ನಡೆಸಲು ಮುಂದಾಗುತ್ತಿದ್ದನ್ನು ನಾನು ನೋಡಿದ ತಕ್ಷಣ, ತಡಮಾಡದೇ ನನ್ನ ಬಳಿಯ ಬ್ಯಾಟನ್ನಿಂದ ಖಡ್ಗವನ್ನು ತಡೆದೆ' ಎಂದು ಕಾನ್ಸ್ಟೇಬಲ್ ನಿತಿನ್ ಹೇಳಿದ್ದಾರೆ.
ನಂತರ ಕೆಲವು ಪ್ರತಿಭಟನಾಕಾರರು ಸಬ್ ಇನ್ಸ್ಪೆಕ್ಟರ್ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದರು. ಕೆಳಗೆ ಉರುಳಿಸಿ ಹಲ್ಲೆಗೆ ಯತ್ನಿಸಿದ್ದರು. ಇದಾದ ನಂತರ ಕೆಲವು ಪೊಲೀಸರು ಬಂದು ಸಬ್ ಇನ್ಸ್ಪೆಕ್ಟರ್ನನ್ನು ರಕ್ಷಿಸಿದರು ಎಂದು ಕಾನ್ಸ್ಟೇಬಲ್ ನಿತಿನ್ ವಿವರಿಸಿದ್ದಾರೆ.
ದೆಹಲಿಯ ಹಿಂಸಾಚಾರದಲ್ಲಿ ಪಾಲ್ಗೊಂಡಿದ್ದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೂರ್ವ ದೆಹಲಿಯ ಡಿಸಿಪಿ ದೀಪಕ್ ಯಾದವ್ ಹೇಳಿದ್ದಾರೆ.