ಲಖನೌ( ಉತ್ತರ ಪ್ರದೇಶ): ಅಖಿಲ ಭಾರತೀಯ ಹಿಂದೂ ಮಹಾಸಭಾ ಅಧ್ಯಕ್ಷ ರಂಜಿತ್ ಬಚ್ಚನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ಆರೋಪಿಗಳನ್ನ ಉತ್ತರ ಪ್ರದೇಶ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಲಖನೌ ಪೊಲೀಸರ ವಿಶೇಷ ಕಾರ್ಯಪಡೆ ಗೋರಖ್‌ಪುರ ಮತ್ತು ರೇ ಬರೇಲಿಯಲ್ಲಿ ಈ ನಾಲ್ವರನ್ನು ವಶಕ್ಕೆ ಪಡೆದಿದೆ. ರಂಜಿತ್ ಬಚ್ಚನ್ ಅವರು ಭಾನುವಾರ ಬೆಳಗ್ಗೆ ವಾಕಿಂಗ್ ಮಾಡುವ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ಹಿನ್ನೆಲೆ ಬಚ್ಚನ್ ಅವರ ಮೊಬೈಲ್ ಫೋನ್‌ನ ಕರೆ ವಿವರಗಳ ಆಧಾರದ ಮೇಲೆ ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಂಜಿತ್ ಬಚ್ಚನ್ ಅವರನ್ನು ಗುಂಡಿಕ್ಕಿ ಕೊಂದ ಕೆಲವೇ ನಿಮಿಷಗಳ ನಂತರ ಶಂಕಿತನೊಬ್ಬ ಹಿಂದೂ ನಾಯಕನ ಆಪ್ತ ಸಂಬಂಧಿಗೆ ಕರೆ ಮಾಡಿದ್ದಾನೆ. ಈ ಹಿನ್ನೆಲೆ ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಅಲ್ಲದೇ, ಬಚ್ಚನ್ ಅವರ ಎರಡನೇ ಪತ್ನಿ ಸ್ಮೃತಿಯನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಏನಿದು ಪ್ರಕರಣ: ಹಜರತ್‌ಗಂಜ್ ಪ್ರದೇಶದ ಗ್ಲೋಬಲ್ ಪಾರ್ಕ್ ಬಳಿ ಫೆಬ್ರವರಿ 1 ರಂದು ರಂಜಿತ್ ಬಚ್ಚನ್ ಅವರನ್ನು ಬೈಕ್‌ನಲ್ಲಿ ಬಂದ ಹಲ್ಲೆಕೋರರು ಹಲವು ಬಾರಿ ಬಚ್ಚನ್ ತಲೆಗೆ ಗುಂಡು ಹಾರಿಸಿ, ಗುಂಡಿನ ದಾಳಿ ನಂತರ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ದರು. ಬಚ್ಚನ್ ಅವರನ್ನು ತಕ್ಷಣವೇ ಲಖನೌದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಿಸಿದೆ ಸಾವಿಗೀಡಾಗಿದ್ದರು. ಗುಂಡಿನ ದಾಳಿ ಅದಾಗ ಬಚ್ಚನ್ ಕಿರಿಯ ಸಹೋದರ ಕೂಡ ಸ್ಥಳದಲ್ಲೇ ಇದ್ದರು, ಈ ಹಿನ್ನೆಲೆ ಅವರಿಗೂ ಕೆಲ ಗಾಯಗಳಾಗಿದ್ದವು.
ಘಟನೆ ಆದ ನಂತರ ಇಬ್ಬರು ಪಿಆರ್‌ವಿ ಪೊಲೀಸ್ ಸಿಬ್ಬಂದಿ, ಕಾನ್‌ಸ್ಟೆಬಲ್ ಮತ್ತು ಹೊರಠಾಣೆ ಉಸ್ತುವಾರಿ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿತ್ತು. ಗುಂಡಿನ ದಾಳಿ ಆದ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿ, ಶಂಕಿತರ ಪತ್ತೆಗೆ 50 ಸಾವಿರ ಬಹುಮಾನ ಘೊಷಣೆ ಮಾಡಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಹಿಂದೂ ಸಮಾಜ ಪಕ್ಷದ ಮುಖಂಡ ಮತ್ತು ಹಿಂದೂ ಮಹಾಸಭೆಯ ಮಾಜಿ ಸದಸ್ಯ ಕಮಲೇಶ್ ತಿವಾರಿ ಅವರನ್ನು ಕೂಡ ಲಖನೌದ ನಾಕಾ ಪ್ರದೇಶದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು.