ನವದೆಹಲಿ: ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳು ಹಾಗೂ ಶಸ್ತ್ರಾಸ್ತ್ರ ಹೊಂದಿದ್ದ ಐಸಿಸ್ ಉಗ್ರನೊಬ್ಬನನ್ನು ಬಂಧಿಸಿದ ದೆಹಲಿಯ ವಿಶೇಷ ಸೆಲ್ ಪೊಲೀಸ್ ಅಧಿಕಾರಿಗಳು, ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರ ಪ್ರದೇಶದಲ್ಲಿ ಭಾರಿ ಕಟ್ಟೆಚ್ಚರ ವಹಿಸಿದ್ದಾರೆ.
ಕಳೆದ ರಾತ್ರಿ ಅಬು ಯೂಸುಫ್ ಎಂಬ ಶಂಕಿತ ಉಗ್ರನನ್ನು ಪೊಲೀಸರು ಬಂಧಿಸಿದ್ದು ಆತನಿಂದ ಭಾರಿ ಪ್ರಮಾಣದ ಸ್ಪೋಟಕ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆದ್ದರಿಂದ ದೆಹಲಿ ಮತ್ತು ಉತ್ತರ ಪ್ರದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.
ಈ ಘಟನೆಯ ಬಳಿಕ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದ್ದರಿಂದ ದೆಹಲಿ ಮತ್ತು ನೋಯ್ಡಾ ಗಡಿ ದಾಟುವ ವಾಹನಗಳ ಮೇಲೆ ಭದ್ರತಾ ಅಧಿಕಾರಿಗಳು ಹೆಚ್ಚು ನಿಗಾ ವಹಿಸುತ್ತಿದ್ದಾರೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚು ಭದ್ರತೆ ನೀಡಲಾಗಿದೆ.
ಬಂಧಿತ ಶಂಕಿತ ಉಗ್ರ ಉತ್ತರಪ್ರದೇಶದ ಬಲರಾಂಪುರ ಜಿಲ್ಲೆಯ ನಿವಾಸಿಯಾಗಿದ್ದು ಆತನಿಂದ ಎರಡು ಸುಧಾರಿತ ಸ್ಫೋಟಕ (ಐಇಡಿ)ಗಳು ಹಾಗೂ ಒಂದು ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಶಂಕಿತ ಉಗ್ರ ರಾಷ್ಟ್ರ ರಾಜಧಾನಿ ದೆಹಲಿಯ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದು, ಏಕಾಂಗಿಯಾಗಿ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂಬ ವಿಚಾರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಇನ್ನಷ್ಟು ಮಾಹಿತಿಯನ್ನು ಉಗ್ರನಿಂದ ಪಡೆಯಲಾಗುತ್ತದೆ. ಅಲ್ಲದೆ ಆರೋಪಿ ಅಬು ಯೂಸುಫ್ ಮತ್ತು ಅವರ ಕುಟುಂಬ ಸದಸ್ಯರ ಮಾಹಿತಿಯನ್ನು ಸಂಗ್ರಹಿಸಲು ತಿಳಿಸಲಾಗಿದೆ. ಬಂಧಿತ ಶಂಕಿತ ಉಗ್ರನೊಂದಿಗೆ ಯಾರೆಲ್ಲ ಸಂಪರ್ಕ ಹೊಂದಿದ್ದಾರೆ ಎಂಬ ಮಾಹಿತಿಯನ್ನು ಸಹ ಪತ್ತೆ ಹಚ್ಚಲಾಗುತ್ತದೆ ಎಂದು ದೆಹಲಿಯ ಉಪ ಪೊಲೀಸ್ ಆಯುಕ್ತ (ವಿಶೇಷ ಕೋಶ) ಪ್ರಮೋದ್ ಸಿಂಗ್ ಕುಶ್ವಾಹ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಪೊಲೀಸ್ ಮಹಾನಿರ್ದೇಶಕ ಹೆಚ್ಸಿ ಅವಸ್ಥಿ ಕೂಡ ಎಲ್ಲ ಪೊಲೀಸ್ ಮುಖ್ಯಸ್ಥರು ಮತ್ತು ಇತರೆ ಭದ್ರತಾ ಅಧಿಕಾರಿಗಳಿಗೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.