ಪಾಟ್ನಾ: ಬಿಹಾರದಲ್ಲಿ ಪ್ರವಾಹದ ರೌದ್ರ ನರ್ತನ ಮುಂದುವರೆದಿದ್ದು, ಮಳೆ ನೀರು ಸಮಸ್ತಿಪುರ ಜಿಲ್ಲೆ ಪ್ರವೇಶಿಸಿದೆ. ಅರ್ಧ ಮಿಲಿಯನ್ಗೂ ಅಧಿಕ ಜನರ ಜೀವನ ದುಸ್ತರಗೊಂಡಿದೆ.
ರಾಜ್ಯ ವಿಪತ್ತು ನಿರ್ವಹಣಾ ಇಲಾಖೆಯ ಬುಲೆಟಿನ್ ಮಾಹಿತಿ ಪ್ರಕಾರ ಮಂಗಳವಾರ ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಪ್ರವಾಹದಿಂದ ತತ್ತರಿಸಿದ್ದಾರೆ ಎನ್ನಲಾಗುತ್ತಿದೆ.
ಸೋಮವಾರದವರೆಗೆ ಬಿಹಾರದ 11 ಜಿಲ್ಲೆಗಳಿಂದ ಒಟ್ಟು 24.42 ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದು, ಸಾಕಷ್ಟು ಸಾವು- ನೋವುಗಳು ಉಂಟಾಗಿವೆ. ನಿನ್ನೆ ಮಂಗಳವಾರ ಹೊಸದಾಗಿ ಪ್ರವಾಹದ ನೀರು ಸಮಸ್ತಿಪುರವನ್ನು ಪ್ರವೇಶಿಸಿದ್ದು, ಈ ಮೂಲಕ ಪ್ರವಾಹ ಪೀಡಿತ ಜಿಲ್ಲೆಗಳ ಸಂಖ್ಯೆ 12 ಕ್ಕೆ ಏರಿಕೆಯಾಗಿದೆ.
ದರ್ಬಂಗಾ ಹೆಚ್ಚು ಹಾನಿಗೊಳಗಾದ ಜಿಲ್ಲೆ:
ದರ್ಬಂಗಾದ 14 ಬ್ಲಾಕ್ ಗಳು ಪ್ರವಾಹದ ನೀರಿನಿಂದ ಹಾನಿಗೊಳಗಾಗಿದ್ದು, ಸುಮಾರು 11.74 ಲಕ್ಷ ಜನರ ಬದುಕು ದುಸ್ತರವಾಗಿದೆ. ಅಧಿಕ ಪ್ರಮಾಣದ ಮಳೆಯಿಂದಾಗಿ ಇಲ್ಲಿನ ಪೊಲೀಸ್ ಠಾಣೆಗಳಲ್ಲಿ ಸುಮಾರು ಎರಡು ಅಡಿಗೂ ಅಧಿಕ ಮಟ್ಟದ ನೀರು ನಿಂತಿದೆ.
ರಕ್ಷಣಾ ಕಾರ್ಯಾಚರಣೆ:
ಎನ್‌ಡಿಆರ್‌ಎಫ್‌ನ ಹದಿನಾರು ತಂಡಗಳು ಮತ್ತು ಎಸ್‌ಡಿಆರ್‌ಎಫ್‌ನ ಒಂಬತ್ತು ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು, ಇಲ್ಲಿಯವರೆಗೆ ಸುಮಾರು 2.62 ಲಕ್ಷ ಜನರನ್ನು ರಕ್ಷಿಸಿ ಸ್ಥಳಾಂತರ ಮಾಡಿವೆ.