ನವದೆಹಲಿ: ದೆಹಲಿ ಹಿಂಸಾಚಾರದ ವೇಳೆ ನಡೆದ ಗುಪ್ತಚರ ಇಲಾಖೆ (ಐಬಿ) ಅಧಿಕಾರಿ ಅಂಕಿತ್ ಶರ್ಮಾ ಅವರ ಕೊಲೆಯಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಆಮ್ ಆದ್ಮಿ ಪಕ್ಷದ ಕೌನ್ಸಿಲರ್ ತಾಹೀರ್ ಹುಸೇನ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಎಫ್ಐಆರ್ ದಾಖಲಾಗುತ್ತಿದ್ದಂತೆಯೇ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಹುಸೇನ್ರನ್ನು ಅಮಾನತು ಮಾಡಲಾಗಿದೆ.
ಮೃತ ಶರ್ಮಾರ ತಂದೆ ರವೀಂದರ್ ಕುಮಾರ್ ನೀಡಿರುವ ದೂರಿನ ಆಧಾರದ ಮೇಲೆ ಐಪಿಸಿ ಸೆಕ್ಷನ್ 365, 302, 201ರ ಅಡಿಯಲ್ಲಿ ದೆಹಲಿಯ ದಯಾಲ್ಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೇ ಹುಸೇನ್‌ಗೆ ಸೇರಿದ ಈಶಾನ್ಯ ದೆಹಲಿಯ ಖಜೂರಿ ಖಾಸ್ ಪ್ರದೇಶದಲ್ಲಿರುವ ಕಾರ್ಖಾನೆಗೆ ಪೊಲೀಸರು ಬೀಗ ಜಡಿದಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆ ಭುಗಿಲೇಳುತಿದ್ದಂತೆಯೇ ಬುಧವಾರ ಚಾಂದ್ ಬಾಗ್ ಪ್ರದೇಶದಲ್ಲಿ ಐಬಿ ಅಧಿಕಾರಿ ಅಂಕಿತ್ ಶರ್ಮಾರ ಮೃತದೇಹ ಪತ್ತೆಯಾಗಿತ್ತು. ಹಿಂಸಾಚಾರದ ವೇಳೆ ಚಾಂದ್ ಬಾಗ್‌ನಲ್ಲಿರುವ ಹುಸೇನ್‌ಗೆ ಸೇರಿದ ಕಟ್ಟಡವೊಂದರ ಮೇಲೆ ನಿಂತು ಕೆಲವರು ಕಲ್ಲು ತೂರಾಟ ನಡೆಸಿ ಅಂಕಿತ್ ಶರ್ಮಾರನ್ನ ಕೊಂದಿದ್ದಾರೆ ಎಂದು ಶರ್ಮಾ ಕುಟುಂಬಸ್ಥರು ಆರೋಪಿಸಿದ್ದಾರೆ.
ಮೂರು ದಿನಗಳ ಕಾಲ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೇಬಲ್, ಐಬಿ ಅಧಿಕಾರಿ ಸೇರಿ ಒಟ್ಟು 38 ಮಂದಿ ಮೃತಪಟ್ಟಿದ್ದು, ಸುಮಾರು 200 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.