ದೆಹಲಿ: ತೆಲುಗು ಮಾಧ್ಯಮವನ್ನ ಇಂಗ್ಲಿಷ್ ಮಾಧ್ಯಮಕ್ಕೆ ಪರಿವರ್ತಿಸುವ ವಿಚಾರವಾಗಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದೆ.
ಆಂಗ್ಲ ಮಾಧ್ಯಮದ ಮೂಲಕ ರಾಜ್ಯದ ಎಲ್ಲ ವರ್ಗದ ಜನರಿಗೂ ಸಮಾನ ಶಿಕ್ಷಣ ನೀಡಿದಂತಾಗುತ್ತದೆ. ಜತೆಗೆ ವಿದ್ಯಾರ್ಥಿಗಳ ಬೆಳವಣಿಗೆಗೆ ಉತ್ತಮ ಅವಕಾಶ ಸಿಗುತ್ತವೆ. ಸಮಾಜದ ಎಲ್ಲಾ ವರ್ಗದ ವಿದ್ಯಾರ್ಥಿಗಳ ಭವಿಷ್ಯ ಗಮನದಲ್ಲಿಟ್ಟುಕೊಂಡು ನಾವು ಈ ನಿರ್ಧಾರ ಕೈಗೊಂಡಿದ್ದೇವೆಂದು ಸುಪ್ರೀಂ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠಕ್ಕೆ ಆಂಧ್ರ ಸರ್ಕಾರದ ಪರ ವಕೀಲ ಕೆ.ವಿ. ವಿಶ್ವನಾಥ್ ಮನವರಿಕೆ ಮಾಡಿಕೊಟ್ಟರು.
ಅಲ್ಲದೆ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಲು ಇಚ್ಛಿಸದೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಲು ಇಚ್ಛಿಸುವ ಮಕ್ಕಳಿಗೂ ತೆಲುಗು ಶಾಲೆಗಳನ್ನ ತೆರೆದು ಸಾರಿಗೆ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು. ಈ ಹಿಂದೆಯೂ ಬಹುಪಾಲು ಪೋಷಕರು ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಿಕ್ಷಣದ ಅವಶ್ಯಕತೆಯಿದ್ದು, ತೆಲುಗು ಮಾಧ್ಯಮವನ್ನ ಆಂಗ್ಲ ಮಾಧ್ಯಮಕ್ಕೆ ಪರಿವರ್ತಿಸುವಂತೆ ಹೇಳಿದ್ದರು. ಸರ್ಕಾರ ತಜ್ಞರ ಜತೆ ಸಮಾಲೋಚನೆ ನಡೆಸಿ ಈ ತೀರ್ಮಾನ ಕೈಗೊಂಡಿದೆ ಎಂದು ಹೇಳಿದರು.
ಸರ್ಕಾರದ ವಾದವನ್ನ ಆಲಿಸಿದ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ಪೀಠ ಮುಂದಿನ ವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.
ಮಾತೃಭಾಷೆಯಲ್ಲಿಯೇ ಮಕ್ಕಳಿಗೆ ಶಿಕ್ಷಣ ಕೊಡಬೇಕು ಅನ್ನೋ ದೃಷ್ಟಿಯಿಂದ ಸರ್ಕಾರದ ಈ ನಿರ್ಧಾರವನ್ನ ಏಪ್ರಿಲ್ನಲ್ಲಿ ಆಂಧ್ರ ಹೈಕೋರ್ಟ್ ತಡೆಹಿಡಿದಿತ್ತು. ಹೈಕೋರ್ಟ್ ಆದೇಶವನ್ನ ಪ್ರಶ್ನಿಸಿ ಜಗನ್ ಸರ್ಕಾರ ಸುಪ್ರೀಂ ಮೆಟ್ಟಿಲೇರಿದೆ.