ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ ದಿನಾಂಕ ಮುಂದಿನ ವಾರವೇ ಪ್ರಕಟಗೊಳ್ಳುವ ಸಾಧ್ಯತೆಗಳಿವೆ ಎಂದು ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ರಾಷ್ಟ್ರೀಯ ಸಾರ್ವತ್ರಿಕ ಚುನಾವಣೆಗೆ ಎಲ್ಲ ಸಿದ್ಧತೆಗಳನ್ನ ಪೂರ್ಣಗೊಳಿಸಿರುವ ಕೇಂದ್ರ ಚುನಾವಣೆ ಆಯೋಗ, ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲೇ ಮತದಾನ ಪ್ರಕ್ರಿಯ ನಡೆಸಲು ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ. ಚುನಾವಣೆ ಹಿನ್ನೆಲೆಯಲ್ಲಿ ಮತದಾನ ದಿನಾಂಕವನ್ನ ಮುಂದಿನ ವಾರದ ಆರಂಭದಲ್ಲೇ ಅಧಿಕೃತವಾಗಿ ಪ್ರಕಟಗೊಳ್ಳಿಸುವ ಸಾಧ್ಯತೆ ಇದೆ.
ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡುತ್ತಿದ್ದಂತೆಯೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ. ಒಮ್ಮೆ ನೀತಿ ಸಂಹಿತೆ ಜಾರಿಗೆ ಬಂದ ಮೇಲೆ ರಾಜ್ಯ, ಕೇಂದ್ರ ಹಾಗೂ ಸ್ಥಳೀಯ ಆಡಳಿತಗಳು ಹೊಸ ಯೋಜನೆಗಳ ಘೋಷಣೆ ಮಾಡುವಂತಿಲ್ಲ. ಸರ್ಕಾರಿ ಶಂಕು ಸ್ಥಾಪನೆ, ಆಸೆ ಆಮೀಷಗಳನ್ನ ಒಡ್ಡುವಂತಿಲ್ಲ.
ಮುಂಬರುವ ಚುನಾವಣೆಗಾಗಿ ಈಗಾಗಲೇ ಚುನಾವಣೆ ಆಯೋಗ ಮಾಡಿಕೊಂಡಿರುವ ಸಿದ್ಧತೆ ಅಂತಿಮ ಹಂತದಲ್ಲಿದ್ದು, ಅದು ಮುಕ್ತಾಯಗೊಳ್ಳುತ್ತಿದ್ದಂತೆ ಸುದ್ದಿಗೋಷ್ಠಿ ನಡೆಸಿ 17ನೇ ಲೋಕಸಭಾ ಚುನಾವಣೆ ದಿನಾಂಕ ಹೊರಹಾಕಲಿದೆ ಎಂದು ತಿಳಿದು ಬಂದಿದೆ.
ಸದ್ಯ ಆಡಳಿತ ನಡೆಸುತ್ತಿರುವ ಸರ್ಕಾರದ ಅವಧಿ ಜೂನ್ 3ಕ್ಕೆ ಮುಕ್ತಾಯಗೊಳ್ಳಲಿದ್ದು, ಎಪ್ರಿಲ್-ಮೇ ತಿಂಗಳಲ್ಲಿ ಒಟ್ಟು 7ರಿಂದ 8 ಹಂತಗಳಲ್ಲಿ ಮತದಾನ ನಡೆಯಲಿದ್ದು, ಈ ವಾರದ ಕೊನೆ ಅಥವಾ ಮುಂದಿನ ವಾರದಲ್ಲಿ ಚುನಾವಣೆ ದಿನಾಂಕ ಹೊರಬೀಳಲಿದೆ. ಇದರ ಜತೆಗೆ ಜಮ್ಮು-ಕಾಶ್ಮೀರದ ವಿಧಾನಸಭೆ ಚುನಾವಣೆ ಕೂಡ ನಡೆಯಲಿದೆ ಎಂದು ಈಗಾಗಲೇ ಚುನಾವಣಾ ಆಯೋಗ ತಿಳಿಸಿದೆ.