ಗುವಾಹಟಿ: ಅಸ್ಸೋಂನ ಸೋನಿತ್‌ಪುರದಲ್ಲಿ ಶನಿವಾರ ಬೆಳಗ್ಗೆ 5:26ಕ್ಕೆ ರಿಕ್ಟರ್ ಸ್ಕೇಲ್‌ನಲ್ಲಿ 3.5ರ ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಇದಕ್ಕೂ ಮುನ್ನ, ಮಿಜೋರಾಂನ ಚಂಪೈ ಬಳಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 3.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಒದಗಿಸಿದ ಮಾಹಿತಿಯ ಪ್ರಕಾರ, ಭೂಕಂಪವು ಚಂಪೈನ ಆಗ್ನೇಯಕ್ಕೆ 29 ಕಿ.ಮೀ ದೂರದಲ್ಲಿ ಕೇಂದ್ರೀಕೃತವಾಗಿತ್ತು ಎಂದು ಗೊತ್ತಾಗಿದೆ.
ಇದಕ್ಕೂ ಮುನ್ನ, ಜೂನ್ 18 ಮತ್ತು ಜೂನ್ 24ರ ನಡುವೆ ಮೂರು ಜಿಲ್ಲೆಗಳಾದ ಚಂಪೈ, ಸೈಚುಯಲ್ ಮತ್ತು ಸೆರ್ಚಿಪ್ನಲ್ಲಿ ಸರಣಿ ಭೂಕಂಪನಗಳು ಸಂಭವಿಸಿದ್ದವು. ಉತ್ತರ ಭಾರತದಲ್ಲಿ ಕೆಲ ತಿಂಗಳುಗಳಿಂದ ಲಘು ಭೂಕಂಪನದ ಸುದ್ದಿಗಳು ಆಗುತ್ತಲೇ ಇವೆ. ಇದು ದೇಶದ ಜನರಲ್ಲಿ ತುಸು ಆತಂಕವನ್ನು ಸೃಷ್ಟಿಸಿದೆ.
ಒಡಿಶಾದ ಬೆರ್ಹಾಂಪುರದಲ್ಲೂ 3.8 ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ ರಾಷ್ಟ್ರೀಯ ಭೂಕಂಪನಶಾಸ್ತ್ರ ಕೇಂದ್ರ ಹೇಳಿದೆ. ಬೆಳಗ್ಗೆ 7.10 ರ ಸುಮಾರಿಗೆ ಈ ಘಟನೆ ನಡೆದಿದೆ.