ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಲಾಕ್‌ಡೌನ್ 'ಜನ ವಿರೋಧಿ ವಿಪತ್ತು ಯೋಜನೆ' ಎಂದು ವ್ಯಾಖ್ಯಾನಿಸಿದ್ದಾರೆ.
ದೇಶದಲ್ಲಿ ವಿಪತ್ತು ಯೋಜನೆ ಜಾರಿ ಮೂಲಕ ಅಸಂಘಟಿತ ವಲಯ ಮತ್ತು ಅನೌಪಚಾರಿಕ ಆರ್ಥಿಕತೆಯನ್ನು ನಾಶ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಕಿಡಿಕಾರಿದ್ದಾರೆ. ಆರ್ಥಿಕ ಕುಸಿತ ಕುರಿತು ಸರಣಿ ವಿಡಿಯೋ ಭಾಗವಾಗಿ ಇಂದು ಮತ್ತೊಂದು ವಿಡಿಯೋ ಮಾಡಿರುವ ಎಐಸಿಸಿ ಮಾಜಿ ಅಧ್ಯಕ್ಷ, ಏಕಾಏಕಿ ಲಾಕ್‌ಡೌನ್ ಜಾರಿ ಮಾಡಿದ್ದು ಅಸಂಘಟಿತ ವಲಯಕ್ಕೆ ಗಲ್ಲು ಶಿಕ್ಷೆ ವಿಧಿಸಿದಂತಾಗಿದೆ. 21 ದಿನಗಳಲ್ಲಿ ಕೊರೊನಾ ಹೋಗುತ್ತೆ ಎಂದು ಹೇಳಿರುವ ಜೊತೆಗೆ ಟ್ವೀಟ್ ಕೂಡ ಮಾಡಿದ್ದಾರೆ.
ಕೋವಿಡ್ ಹೆಸರಿನಲ್ಲಿ ಕೇಂದ್ರ ಸರ್ಕಾರ ಅಸಂಘಟಿತ ವಲಯಗಳ ಮೇಲೆ ದಾಳಿ ಮಾಡಿದೆ. ಸಣ್ಣ, ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತಿದ್ದವರು, ಕೂಲಿ ಕಾರ್ಮಿಕರು ಅಂದು ದುಡಿದ ಹಣದಲ್ಲಿ ಊಟ ಮಾಡುತ್ತಿದ್ದರು. ಯಾವುದೇ ಮುನ್ಸೂಚನೆ ನೀಡದೆಯೇ ಲಾಕ್‌ಡೌನ್ ಮಾಡುವ ಮೂಲಕ ಅವರ ಮೇಲೆ ನೀವು ದಾಳಿ ಮಾಡಿದ್ದೀರಿ ಎಂದು ದೂರಿದ್ದಾರೆ.
21 ದಿನದಲ್ಲಿ ಕೊರೊನಾ ಅಂತ್ಯವಾಗಲಿದೆ ಎಂದು ಪ್ರಧಾನಿ ಹೇಳಿದ್ದರು. ಆದರೆ 21 ದಿನದಲ್ಲಿ ಅಸಂಘಟಿತ ವಲಯದ ಬೆನ್ನು ಮೂಳೆಯನ್ನು ಮುರಿದಿದ್ದೀರಿ ಎಂದು ನಮೋ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ನಿರ್ಬಂಧ ಜಾರಿಯಿಂದಾಗಿ 383 ಮಂದಿ ಮೃತಪಟ್ಟರೆ, 20ರಿಂದ 30 ವರ್ಷದೊಳಗಿನ 2.7 ಕೋಟಿ ಯುವ ಜನ ನಿರುದ್ಯೋಗಿಗಳಾಗಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.