ಪಾಲಕ್ಕಾಡ್ (ಕೇರಳ): ಇಡೀ ಜಗತ್ತು ಕೊರೊನಾ ವೈರಸ್ ಹಿಡಿತದಲ್ಲಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಭಾರತದಲ್ಲಿಯೂ ಹಲವಾರು ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ, ಪಾಲಕ್ಕಾಡ್ ಜಿಲ್ಲೆಯ ಕೊಲ್ಲಂಗೋಟ್ನಲ್ಲಿ ‘ಕೊರೊನಾ’ ಸ್ವತಃ ಸಿಕ್ಕಿಬಿದ್ದಿದೆ. ಅಗ್ನಿಶಾಮಕ ಸಿಬ್ಬಂದಿ ‘ಕೊರೊನಾ’ವನ್ನು ರಕ್ಷಿಸಿ ಅದರ ಜೀವ ಉಳಿಸಿದ್ದಾರೆ.
ಯಾರಾದರೂ ‘ಕೊರೊನಾ’ ಜೀವವನ್ನು ಏಕೆ ಉಳಿಸುತ್ತಾರೆ ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಈ ‘ಕೊರೊನಾ’ ವೈರಸ್ ಅಲ್ಲ, ಬದಲಾಗಿ ಒಂದು ಬೆಕ್ಕಿನ ಮರಿ!
ಕೊಲ್ಲಂಗೋಡ್‌ನ ವಿಜಯಲಕ್ಷ್ಮಿ ಎಂಬವವರ ಮನೆಯಲ್ಲಿ ಸಾಕು ಬೆಕ್ಕು ಕೋವಿಡ್ -19 ಕಾಲದಲ್ಲಿ 3 ಮರಿಗಳಿಗೆ ಜನ್ಮ ನೀಡಿತ್ತು. ಹೀಗಾಗಿ ವಿಜಯಲಕ್ಷ್ಮಿಯ ಮಗಳು ಮೂರು ಪುಟ್ಟ ಬೆಕ್ಕಿನ ಮರಿಗಳಿಗೆ ಕೋವಿಡ್, ನಿಫಾ ಮತ್ತು ಕೊರೊನಾ ಎಂದು ಹೆಸರಿಟ್ಟಳು. ಮೂರು ಪುಟ್ಟ ಮರಿಗಳು ಮನೆಯಲ್ಲಿ ಆಡುತ್ತಿದ್ದಾಗ, ಕೊರೊನಾ ಹೆಸರಿನ ಬೆಕ್ಕಿನ ಮರಿ ಪಿವಿಸಿ ಪೈಪ್ ಒಳಗೆ ಸಿಲುಕಿಕೊಂಡಿತ್ತು.
ಅದರ ತಲೆ ಮತ್ತು ಕಾಲುಗಳು ಪೈಪ್ ಒಳಗೆ ಸಿಲುಕಿಕೊಂಡು, ಅದು ಹೊರಬರಲು ಸಾಧ್ಯವಾಗಲಿಲ್ಲ. ಅದನ್ನು ರಕ್ಷಿಸಲು ಕುಟುಂಬ ಸದಸ್ಯರು ಎಷ್ಟೇ ಪ್ರಯತ್ನಪಟ್ಟರೂ ವ್ಯರ್ಥವಾಯಿತು. ಅಂತಿಮವಾಗಿ, ಪುಟ್ಟ ಕೊರೊನಾ ಹೆಸರಿನ ಬೆಕ್ಕಿನ ಮರಿಯನ್ನು ರಕ್ಷಿಸಲು ಅಗ್ನಿಶಾಮಕ ಸಿಬ್ಬಂದಿ ಕರೆಯಿಸಬೇಕಾಯಿತು.
ಅವರು ಪೈಪ್ ಕತ್ತರಿಸಿ ಬೆಕ್ಕಿನ ಮರಿ ಕೊರೊನಾಗೆ ಯಾವುದೇ ಗಾಯಗಳಾಗದಂತೆ ರಕ್ಷಿಸಿದರು. ಪಿವಿಸಿ ಪೈಪ್‌ನೊಳಗೆ 'ಲಾಕ್ ಡೌನ್' ಆಗಿದ್ದ ಕೊರೊನಾಗೆ ಹೊಸ ಜೀವನ ಸಿಕ್ಕಿತು.