ನವದೆಹಲಿ: ಭಾರತ-ಚೀನಾ ಗಡಿಯಲ್ಲಿ ಕ್ಷಿಪಣಿಗಳನ್ನು ನಿಯೋಜಿಸುವ ನೆಲೆಗಳ ನಿರ್ಮಾಣದ ಬಗ್ಗೆ ಕಾಂಗ್ರೆಸ್ ಮತ್ತೆ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಸಂಸತ್ನ ಮಾನ್ಸೂನ್ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಸರ್ಕಾರ ಚರ್ಚಿಸಬೇಕು ಎಂದು ಹೇಳಿದೆ.
ವರ್ಚುವಲ್ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪಕ್ಷದ ಮುಖಂಡ ರಾಜೀವ್ ಶುಕ್ಲಾ, "ಇತ್ತೀಚಿನ ಮಾಹಿತಿ ಮತ್ತು ಉಪಗ್ರಹ ಚಿತ್ರಗಳ ಪ್ರಕಾರ, ಚೀನಾ ಖಂಡಾಂತರ ಕ್ಷಿಪಣಿಗಳ ನಿಯೋಜನೆಗೆ ನೆಲೆಗಳನ್ನು ನಿರ್ಮಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿಯಾಗಿದೆ" ಎಂದು ಹೇಳಿದರು.
ಚೀನಾದ ಈ ನಿರ್ಮಾಣ ಭಾರತದ ಗಡಿಗೆ ಬಹಳ ಹತ್ತಿರದಲ್ಲಿರುವುದರಿಂದ ಈ ಬೆಳವಣಿಗೆ ಆತಂಕಕಾರಿ ಎಂದರು.
ಉಪಗ್ರಹದ ಚಿತ್ರಗಳನ್ನು ತೋರಿಸಿದ ಶುಕ್ಲಾ, "ಚೀನಾ ತಮ್ಮ ಇಡೀ ಸೈನ್ಯವನ್ನು ಅಲ್ಲಿ ನಿಯೋಜಿಸಬಹುದಾದಂತಹ ಕಾರ್ಯತಂತ್ರ ಮಾಡಿದೆ. ಇದರಿಂದಾಗಿ ಅರುಣಾಚಲ ಪ್ರದೇಶ ಮತ್ತು ಇತರ ಈಶಾನ್ಯ ರಾಜ್ಯಗಳ ಗಡಿಗಳಲ್ಲಿ ಅವರ(ಚೀನಿಯರ) ಹೆಚ್ಚಿನ ಉಪಸ್ಥಿತಿಯಿದೆ.
"ಸದ್ಯ ಅವರು ಎಲ್ಲಾ ಮೂಲ ಸೌಕರ್ಯಗಳನ್ನು ನಿರ್ಮಿಸಿದ್ದಾರೆ ಮತ್ತು ಅವರು ಉತ್ತರಾಖಂಡ್ನ ಲಿಪು ಸರೋವರ ಪ್ರದೇಶ, ಡೊಕ್ಲಾಮ್ ಅಥವಾ ಲಡಾಖ್ ಗಡಿಗಳ ಸಮೀಪವಿರುವ ಗಡಿ ಪ್ರದೇಶವಾಗಲಿ ಎಲ್ಲಾ ಕಡೆಯಿಂದಲೂ ನಮ್ಮನ್ನು ಸುತ್ತುವರಿಯಲು ಪ್ರಯತ್ನಿಸುತ್ತಿದ್ದಾರೆ ಮತ್ತು ಅವರು ಅವರ ಸೈನ್ಯದ ಉಪಸ್ಥಿತಿಯನ್ನು ಹೆಚ್ಚಿಸುತ್ತಿದ್ದಾರೆ. ಇದು ಭಾರತದ ಆತಂಕಕ್ಕೆ ಕಾರಣವಾಗಿದೆ” ಎಂದು ಶುಕ್ಲಾ ಹೇಳಿದ್ದಾರೆ.
ಸೆಪ್ಟೆಂಬರ್ 14ರಿಂದ ಪ್ರಾರಂಭವಾಗುವ ಸಂಸತ್ ಮಾನ್ಸೂನ್ ಅಧಿವೇಶನದಲ್ಲಿ ಕೋವಿಡ್ -19 ಚರ್ಚೆಯ ನಂತರ ಭಾರತ-ಚೀನಾ ಗಡಿ ಸಮಸ್ಯೆಯನ್ನು ಸರ್ಕಾರ ಆದ್ಯತೆಯ ಮೇಲೆ ಚರ್ಚಿಸಬೇಕು ಎಂದಿದ್ದಾರೆ.