ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷವಾಗಿದ್ದುಕೊಂಡೂ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ಬೇಸರಕ್ಕೊಳಗಾಗಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ ರಾಹುಲ್ರ ಮನವೊಲಿಸಿರುವ ಹಿರಿಯ ನಾಯಕರು, ಅಧ್ಯಕ್ಷರಾಗಿ ಮುಂದುವರೆಯುವಂತೆ ತಿಳಿಸಿದ್ದಾರೆ. ತನ್ನ ಬದಲು ಪ್ರಿಯಾಂಕಾ ಈ ಜವಾಬ್ದಾರಿ ನಿರ್ವಹಿಸುವಕ್ಕೆ ರಾಹುಲ್ ಬೇಡ ಎಂದರು ಎಂದು ಮೂಲಗಳು ತಿಳಿಸಿವೆ.
ಸಭೆ ವೇಳೆ ಮಾತನಾಡಿದ ರಾಹುಲ್, ಕಾಂಗ್ರೆಸ್ ಪಕ್ಷದ ಓರ್ವ ಶಿಸ್ತಿನ ಸಿಪಾಯಿಯಾಗಿ ನಾನು ನಿರ್ಭಯದಿಂದ ಹೋರಾಟ ಮುಂದುವರೆಸುತ್ತೇನೆ. ಆದರೆ, ಪಕ್ಷದ ಅಧ್ಯಕ್ಷನಾಗಿ ಮುಂದುವರೆಯಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು. ರಾಹುಲ್ರ ಈ ನಿರ್ಧಾರ ಪಕ್ಷದ ನಾಯಕರಿಗೆ ಶಾಕ್ ನೀಡಿತ್ತು.
ಈ ವೇಳೆ, ಅಧ್ಯಕ್ಷಗಿರಿಗೆ ಪ್ರಿಯಾಂಕಾರ ಹೆಸರು ಕೇಳಿಬಂದಾಗ ರಾಹುಲ್, ನನ್ನ ಸಹೋದರಿಯನ್ನು ಇದಕ್ಕೆಲ್ಲಾ ಎಳೆಯಬೇಡಿ ಎಂದು ಹೇಳಿದ್ದಾರೆ . ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಗಾಂಧಿ ಕುಟುಂಬದವರೇ ನಿಭಾಯಿಸಬೇಕೆಂದೇನೂ ಇಲ್ಲ ಎಂದೂ ತಿಳಿಸಿದ್ದಾರೆ.
ಸೋನಿಯಾ ಹಾಗೂ ಪ್ರಿಯಾಂಕಾ ಸೇರಿ ರಾಹುಲ್ರ ಮನವೊಲಿಸಲು ಯತ್ನಿಸಿದರೂ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಆದರೆ ಪಕ್ಷದ ಹಿರಿಯ ನಾಯಕರೆಲ್ಲರೂ ಕಿವಿಮಾತು ಹೇಳಿದಾಗ ರಾಹುಲ್ ಒಪ್ಪಿಕೊಂಡರು ಎನ್ನಲಾಗಿದೆ. ಆನಂತರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲ, ರಾಹುಲ್ರ ರಾಜೀನಾಮೆಯನ್ನು ಪಕ್ಷವು ತಿರಸ್ಕರಿಸಿದೆ ಎಂದು ಮಾಹಿತಿ ನೀಡಿದರು.