ಹೈದರಾಬಾದ್: ಲಾಕ್ಡೌನ್ ಸಂಕಷ್ಟದಿಂದ ಹೊರಬರಲು ಈಗ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಸಾಲದು ಎಂದು ಆರ್ಬಿಐನ ಮಾಜಿ ಗವರ್ನರ್ ದುವ್ವರಿ ಸುಬ್ಬರಾವ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಮಂಥನ್ ಫೌಂಡೇಷನ್ ಆಯೋಜಿಸಿದ್ದ ''ಕೊರೊನಾ ಸಂಕಷ್ಟದ ಸವಾಲುಗಳು ಹಾಗೂ ಅರ್ಥಿಕತೆಯ ಆಯಾಮಗಳು'' ಎಂಬ ವಿಚಾರದ ಬಗ್ಗೆ ಮಾತನಾಡುವ ವೇಳೆ, ಹಣಕಾಸು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯಗಳ ಒಟ್ಟು ವಿತ್ತೀಯ ಕೊರತೆ ಶೇ 13 ಅಥವಾ ಶೇ 14ಕ್ಕೆ ತಲುಪುವ ಸಾಧ್ಯತೆಯಿದೆ. ಇದರಿಂದಾಗಿ ಕೇಂದ್ರ ಸರ್ಕಾರ ಸಾಲ ಮಾಡುವುದನ್ನು ನಿಯಂತ್ರಿಸಿಕೊಳ್ಳಬೇಕು. ಇದು ಬಡ್ಡಿ ದರಗಳನ್ನು ಹೆಚ್ಚಿಸುವಂತಹ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಜಿಡಿಪಿಯ ಶೇ 0.8ರಷ್ಟನ್ನು ಈಗಾಗಲೇ ಆರ್ಥಿಕ ಪರಿಹಾರವನ್ನು ಘೋಷಿಸಿದೆ, ಇದು ಸಾಕಾಗುವುದಿಲ್ಲ. ಮಾರ್ಚ್ 26ರಂದು ಘೋಷಣೆಯಾದ ಈ ಹಣ ಕಡಿಮೆ. ಸರ್ಕಾರ ಇದಕ್ಕಾಗಿ ಹೆಚ್ಚು ಹಣವನ್ನು ವಿನಿಯೋಗಿಸಬೇಕು. ಅದರಲ್ಲಿ ಜೀವಗಳನ್ನು ಉಳಿಸಲು ಹೆಚ್ಚಿನ ಪಾಲು ಮೀಸಲಿಡಬೇಕು ಎಂದು ಸಲಹೆ ನೀಡಿದರು.
ಮಾರ್ಚ್ 24ರಂದು ರಾಷ್ಟ್ರಾದ್ಯಂತ ಲಾಕ್ಡೌನ್ ಹೇರಲಾಯಿತು. ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದವು. ಆನಂತರದಲ್ಲಿ ಅವರಿಗೆ ಜೀವನಾವಶ್ಯಕ ಸಾಮಗ್ರಿಗಳನ್ನು ನೀಡಲಾಯಿತು. ಬಹುಪಾಲು ಕುಟುಂಬಗಳ ಉಳಿತಾಯವೂ ಕರಗುತ್ತಿದೆ ಎಂದು ಈ ವೇಳೆ ಅಭಿಪ್ರಾಯಪಟ್ಟರು.
ಸರ್ಕಾರ ಇನ್ನೂ ಹೆಚ್ಚು ಕುಟುಂಬಗಳನ್ನು ಒಳಗೊಳ್ಳಬೇಕಿದೆ. ಇದು ಸರ್ಕಾರದ ವೆಚ್ಚದ ಮೇಲಿರುವ ಸವಾಲು. ಹಣಕಾಸು ಇಲಾಖೆ ಈಗಾಗಲೇ 1.70 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಅನ್ನು ಘೋಷಣೆ ಮಾಡಿದೆ. ಈ ಮೂಲಕ ಬಡವರಿಗೆ ಗ್ಯಾಸ್ ಹಾಗೂ ಆಹಾರ ಧಾನ್ಯಗಳನ್ನು ಒದಗಿಸುತ್ತಿದೆ ಎಂದರು.
ಲಾಕ್ಡೌನ್ ವೇಳೆಯಲ್ಲಿ ಆದ ನಷ್ಟದಿಂದಾಗಿ ಈ ಬಾರಿಯ ಹಣಕಾಸು ವರ್ಷದ ವಿತ್ತೀಯ ಕೊರತೆ ರಾಜ್ಯ ಮತ್ತು ಕೇಂದ್ರಗಳದ್ದು ಸೇರಿ ಜಿಡಿಪಿಯ ಶೇ 6.5ರಷ್ಟಿರುತ್ತದೆ. ವಿತ್ತೀಯ ಕೊರತೆ ಜಿಡಿಪಿಯ ಶೇ 10ರವರೆಗೆ ತಲುಪಬಹುದು. ಇದರ ಜೊತೆಗೆ ಕೇಂದ್ರ ಸರ್ಕಾರ ಮಾಡುತ್ತಿರುವ ಹೆಚ್ಚುವರಿ ಸಾಲಗಳು ವಿತ್ತೀಯ ಕೊರತೆಯನ್ನು ಜಿಡಿಪಿಯ ಶೇ 13 ಅಥವಾ ಶೇ 14ಕ್ಕೆ ಹೆಚ್ಚಿಸುತ್ತದೆ ಎಂದು ಸುಬ್ಬರಾವ್ ಹೇಳಿದರು.
ಪೆಟ್ರೋಲಿಯಂ ಬೆಲೆಗಳಲ್ಲಿ ಇಳಿಕೆ ಹಾಗೂ ಕೃಷಿಯಲ್ಲಿ ಮುನ್ನಡೆ ಇದ್ದರೂ ಕೊರೊನಾ ಸಂಕಷ್ಟದ ನಂತರದ ದಿನಗಳಲ್ಲಿ ದೇಶಿಯ ಹಣಕಾಸು ವಲಯದಲ್ಲಿ ತೀವ್ರ ಒತ್ತಡ ಬೀಳಲಿದೆ. ಕೊರೊನಾ ವೈರಸ್ನೊಂದಿಗೆ ಜೀವನ ನಡೆಸೋದು ಸ್ವಲ್ಪಮಟ್ಟಿಗೆ ಒತ್ತಡ ತರಲಿದೆ. ಭಾರತ ಜೀವ ಮತ್ತು ಜೀವನ ಎರಡರ ನಡುವೆ ದ್ವಂದ್ವದಲ್ಲಿದ್ದು, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಾಗಿ ಕೊರೊನಾ ವಿರುದ್ಧ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.