ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಗಡಿ ಪ್ರದೇಶದಿಂದ ಬಾಂಗ್ಲಾದೇಶದ ಯುವತಿಯೊಬ್ಬಳನ್ನು ರಕ್ಷಿಸಲಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಂಗಳವಾರ ತಿಳಿಸಿದೆ. ಆಕೆಯನ್ನು ಮುಂಬೈಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.
"ಆಗಸ್ಟ್ 25 ರಂದು ಬಿಎಸ್ಎಫ್ ಗುಪ್ತಚರ ದಳದಿಂದ ಬಾಂಗ್ಲಾದೇಶದ ಮಹಿಳೆಯೊಬ್ಬರನ್ನು ಅಂತಾರಾಷ್ಟ್ರೀಯ ಗಡಿ ದಾಟಿಸಿ ಗಡಿ ಗ್ರಾಮವಾದ ಗಂಗೂಲಿಯಾದಲ್ಲಿ ಇಡಲಾ ಎಂದು ನಿರ್ದಿಷ್ಟ ಮಾಹಿತಿ ಬಂದಿದೆ" ಎಂದು ಬಿಎಸ್ಎಫ್ ಅಧಿಕೃತ ಹೇಳಿಕೆ ತಿಳಿಸುತ್ತದೆ.
ಸುಮಾರು 27 ವರ್ಷದ ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ಬಿಒಪಿ ಮುಷ್ಟಫಾಪುರಕ್ಕೆ ಕರೆ ತರಲಾಗಿದೆ. ಪ್ರಾಥಮಿಕ ವಿಚಾರಣೆಯ ಸಮಯದಲ್ಲಿ, ಮಹಿಳೆ ತನ್ನ ಪತಿ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಮತ್ತು ಅವರ ಆರ್ಥಿಕ ಸ್ಥಿತಿ ಹದಗೆಟ್ಟಿದೆ ಎಂದು ತಿಳಿಸಿದ್ದಾಳೆ.
"ಇತ್ತೀಚೆಗೆ, ಆಕೆ ಬಾಂಗ್ಲಾದೇಶದ ಮದಾರಿಪುರ ಗ್ರಾಮದ ದಲಿಮ್ ಎಂಬ ಬಾಂಗ್ಲಾದೇಶದ ಮಾನವ ಕಳ್ಳಸಾಗಣೆದಾರನೊಂದಿಗೆ ಸಂಪರ್ಕಕ್ಕೆ ಬಂದಿದ್ದಾಳೆ. ಆತ ಆಕೆಗೆ ಮುಂಬೈನ ಹೋಟೆಲ್ ನಲ್ಲಿ ಕೆಲಸದ ವ್ಯವಸ್ಥೆ ಮಾಡುವುದಾಗಿ ತಿಳಿಸಿ ಕರೆಸಿಕೊಂಡಿದ್ದಾನೆ. ಆಗಸ್ಟ್ 23 ರಂದು ಆಕೆ ಬಸ್ ಮೂಲಕ ಜೆಶೋರ್ ತಲುಪಿದ್ದಾಳೆ. ನಂತರ ದಲೀಮ್ ಆಕೆಗೆ ಗಂಗೂಲಿಯಾ ಗ್ರಾಮದ ನಿವಾಸಿ ಬಹಾರುಲ್ ಮೊಂಡಾಲ್ ಎಂಬ ಭಾರತೀಯ ಟೌಟ್‌ನ ಮೊಬೈಲ್ ಸಂಖ್ಯೆ ನೀಡಿದ್ದು, ಆತನ ಸಹಾಯದಿಂದ ಆಕೆ ಗಡಿ ದಾಟಿ ಬಂದಿದ್ದಾಳೆ ”ಎಂದು ಬಿಎಸ್ಎಫ್ ತಿಳಿಸಿದೆ.
ಇನ್ನೂ ಗಡಿ ದಾಟಲು ಸಹಾಯ ಮಾಡಿದ್ದಕ್ಕೆ ಮತ್ತು ಮುಂಬೈನಲ್ಲಿ ಕೆಲಸದ ವ್ಯವಸ್ಥೆ ಮಾಡಿದ್ದಕ್ಕಾಗಿ ಆಕೆ ಬಹಾರುಲ್ ಮೊಂಡಾಲ್ಗೆ 20,000 ಮೊತ್ತವನ್ನು ಪಾವತಿಸಿದ್ದಾಳೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಂದಿನ ಕಾನೂನು ಕ್ರಮಕ್ಕಾಗಿ ಮತ್ತು ಮಾನವ ಕಳ್ಳಸಾಗಣೆದಾರರನ್ನು ಪತ್ತೆಹಚ್ಚಲು ಪಿಎಸ್ ಬಾಗ್ದಾ ತನಿಖೆಯನ್ನು ವಹಿಸಿಕೊಂಡಿದ್ದಾರೆ ಎಂದು ಬಿಎಸ್ಎಫ್ ತಿಳಿಸಿದೆ.