ನವದೆಹಲಿ: ಅಕ್ಟೋಬರ್ 21ರಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದ್ದು, ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಇದ್ದ ಎಲ್ಲ ಗೊಂದಲ ಬಗೆಹರಿದಿದೆ. ಆದ್ರೆ 50:50 ಅನುಪಾತದಲ್ಲಿ ಸೀಟು ಹಂಚಿಕೆಗೆ ಸೇನೆ ಪಟ್ಟು ಹಿಡಿದಿದ್ದು ನಾಳೆ ಪೂರ್ಣ ಚಿತ್ರಣ ಸಿಗಲಿದೆ.
ಗುರುವಾರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಪಕ್ಷದ ಸಭೆಯಲ್ಲಿ ಮಹಾರಾಷ್ಟ್ರ ಚುನಾವಣೆಯ ಮೈತ್ರಿ ಅಧಿಕೃತ ಮುದ್ರೆ ಒತ್ತಲಾಯಿತಾದ್ರೂ ಸೀಟು ಹಂಚಿಕೆ ಇನ್ನೂ ಅಂತಿಮವಾಗಿಲ್ಲ.
288 ಸದಸ್ಯಬಲವಿರುವ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಶಿವಸೇನೆ 126 ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಬಿಜೆಪಿ 120 ಸೀಟುಗಳಿಗಿಂತ ಹೆಚ್ಚಿನ ಸೀಟು ನೀಡಲು ಅಸಾಧ್ಯ ಎಂದಿದೆ. ಹೀಗಾಗಿ ಈ ಸೀಟು ಹಂಚಿಕೆ ವಿಚಾರದ ಗೊಂದಲ ಇನ್ನೂ ಬಗೆಹರಿದಿಲ್ಲ. ಜೊತೆಗೆ ಶಿವಸೇನೆ ನವೀ ಮುಂಬೈ, ವಿದರ್ಭ, ಉತ್ತರ ಮಹಾರಾಷ್ಟ್ರ ಹಾಗೂ ಮುಂಬೈ ಕ್ಷೇತ್ರಗಳನ್ನು ಕೇಳಿದೆ ಎನ್ನುವುದು ಬಿಜೆಪಿಗೆ ತಲೆನೋವು ತಂದಿದೆ ಎಂಬ ಮಾಹಿತಿ ದೊರೆತಿದೆ.
ಇದೇ ವಿಚಾರವಾಗಿ ಗುರುವಾರ ಮಧ್ಯಾಹ್ನದ ಬಳಿಕ ಆರಂಭವಾದ ಸಭೆ ಬರೋಬ್ಬರಿ ಒಂಭತ್ತು ಗಂಟೆಗೂ ಹೆಚ್ಚು ಕಾಲ ನಡೆದಿತ್ತು.
ಹೇಗಿದೆ ಚುನಾವಣಾ ಕಣ..?
ಮಹಾರಾಷ್ಟ್ರದಲ್ಲಿ ಹಾಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ತಮ್ಮ ಸ್ಥಾನ ಉಳಿಸಿಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಶಿವಸೇನೆಯ ಜೊತೆಗಿನ ಮೈತ್ರಿ ಬಿಜೆಪಿಗೆ ನಿರ್ಣಾಯಕವಾಗಲಿದೆ.
ಇದರ ಜೊತೆಗೆ ಶರದ್ ಪವಾರ್ ನೇತೃತ್ವದ ನ್ಯಾಷನಲ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ) ಸಣ್ಣಪುಟ್ಟ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಂಡು ಚುನಾವಣಾ ಅಖಾಡಕ್ಕಿಳಿಯಲು ಕಾರ್ಯತಂತ್ರ ರೂಪಿಸುತ್ತಿದೆ.
2014 ಫಲಿತಾಂಶ ಏನಾಗಿತ್ತು..?
2014ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿತ್ತು. 288 ಕ್ಷೇತ್ರಗಳ ಪೈಕಿ 260 ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಬಿಜೆಪಿ 122 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಅತ್ತ ಮೈತ್ರಿಪಕ್ಷ ಶಿವಸೇನೆ 63 ಸ್ಥಾನ ಪಡೆದಿತ್ತು. ಕಾಂಗ್ರೆಸ್ 42 ಹಾಗೂ ಎನ್ಸಿಪಿ 41 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.